

ಮುಂಡರಗಿ: ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದ ಕಾರಣದಿಂದ ಈ ಭಾಗದ ರೈತರೇ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ತಾಲೂಕಿನ ತಿಪ್ಪಾಪೂರದಿಂದ ಬೆಣ್ಣಿಹಳ್ಳಿ ಸಮೀಪವಿರುವ ನವೋದಯ ಶಾಲೆಯವರೆಗೆ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ, ನವೋದಯ ಶಾಲೆಯ ಭಾಗದಿಂದ ಬೆಣ್ಣಿಹಳ್ಳಿ-ಬೀಡನಾಳ ರಸ್ತೆವರೆಗೆ ಸುಮಾರು 200 ಮೀಟರ್ ರಸ್ತೆಯನ್ನು ಡಾಂಬರೀಕರಣ ಮಾಡದೇ ಹಾಗೆ ಬಿಡಲಾಗಿದೆ. 200 ಮೀಟರ್ ರಸ್ತೆಯ ನಡುವೆ ಕಲಕೇರಿ ಭಾಗದಿಂದ ಬರುವ ಹಿರೇಹಳ್ಳ ಇರುವುದರಿಂದ ಸದ್ಯ ಮಳೆಗಾಲ ಆರಂಭಗೊಂಡಿದ್ದರಿಂದಾಗಿ ಹಳ್ಳದಲ್ಲಿ ನೀರು ಹರಿಯಲು ಆರಂಭಿಸಿದೆ. ಇದರಿಂದ ಈ ರಸ್ತೆ ಮಾರ್ಗವಾಗಿ ರೈತರಿಗೆ ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಬಿತ್ತನೆ ಕಾರ್ಯ, ಹೊಲಗಳಲ್ಲಿನ ಮತ್ತಿತರ ಕೆಲಸಗಳಿಗೆ ಮತ್ತು ತಿಪ್ಪಾಪೂರ-ಬೆಣ್ಣಿಹಳ್ಳಿ ಮಾರ್ಗಕ್ಕೆ ಸಂಚರಿಸುವುದು ತೊಂದರೆಯಾಗುತ್ತಿತ್ತು. ಹೀಗಾಗಿ ಸ್ವತಃ ರೈತರೇ ಹಳ್ಳಕ್ಕೆ ಸಿಮೆಂಟ್ ಪೈಪ್ಗಳನ್ನು ಹಾಕಿ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ, ಟ್ರ್ಯಾಕ್ಟರ್ಗಳ ಸಹಾಯದಿಂದ ಕಲ್ಲು, ಗರಸು ಹಾಕಿ ರಸ್ತೆಯನ್ನು ಸಮತಟ್ಟು ಮಾಡಿಕೊಂಡಿದ್ದಾರೆ.
ಹಾಗೆಯೇ ಪೂರ್ಣ ಪ್ರಮಾಣದ 200 ಮೀಟರ್ ರಸ್ತೆಗೂ ಗರಸು ಹಾಕಿ ಸಮತಟ್ಟು ಮಾಡಿ ತಾತ್ಕಾಲಿಕವಾಗಿ ಸಂಚರಿಸಲು ಸ್ವಲ್ಪ ಮಟ್ಟಿನ ಅನುಕೂಲತೆ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಎರಡು ವರ್ಷಗಳಿಂದ ತಿಪ್ಪಾಪೂರದಿಂದ ಬೆಣ್ಣಿಹಳ್ಳಿ-ಬೀಡನಾಳ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸುಮಾರು 200 ಮೀಟರ್ ರಸ್ತೆಯು ದುರಸ್ತಿ ಸ್ಥಿತಿಯಲ್ಲಿತ್ತು. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದಿಸುವ ಕೆಲಸವಾಗಲಿಲ್ಲ. ಹೀಗಾಗಿ ಇದೇ ಭಾಗದಲ್ಲಿರುವ ಹಿರೇಹಳ್ಳಕ್ಕೆ ಸಿಮೆಂಟ್ ಪೈಪ್ ಹಾಕಿ, ಕಲ್ಲು, ಗರಸು ಹಾಕಿ ದುರಸ್ತಿಯಲ್ಲಿದ್ದ 200 ಮೀಟರ್ ಸಂಪೂರ್ಣ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡಿದ್ದೇವೆ. ಇದರಿಂದ ಹೊಲಗಳಿಗೆ ಹೋಗುವುದಕ್ಕೆ ಅನುಕೂಲವಾಗುತ್ತದೆ. ಬಿತ್ತನೆ ಕಾರ್ಯವನ್ನು ಈಗ ಆರಂಭಿಸಬೇಕಾಗಿದೆ. ಹೀಗಾಗಿ 25ಕ್ಕೂ ಹೆಚ್ಚು ರೈತರು ಸೇರಿ ಸ್ವಂತ ಖರ್ಚಿನಲ್ಲಿ ಜೆಸಿಬಿ, ಟ್ರ್ಯಾಕ್ಟರ್ ತೆಗೆದುಕೊಂಡು ರಸ್ತೆ ದುರಸ್ತಿ ಮಾಡಿಕೊಂಡಿದ್ದೇವೆ. | ಶರಣಬಸಪ್ಪ ಸೂಲಿ ಬೆಣ್ಣಿಹಳ್ಳಿ ರೈತ