7 ತಾಸು ತ್ರೀಫೇಸ್ ವಿದ್ಯುತ್ ಪಟ್ಟು

07 MDG-2
Published on

ಮುಂಡರಗಿ: ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಹಿನ್ನೆಲೆ ಪಟ್ಟಣ ಸೇರಿ ತಾಲೂಕಿನ ಬರದೂರು, ಕೊರ್ಲಹಳ್ಳಿ, ಹೆಸರೂರು, ನಾಗರಹಳ್ಳಿ ಮೊದಲಾದ ಗ್ರಾಮಗಳ ರೈತರು ಶನಿವಾರ ಹೆಸ್ಕಾಂ ಕಚೇರಿ ಮುಂದಿನ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಅ.6ರಿಂದ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಬಂದ್ ಮಾಡಲಾಗಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಸಮರ್ಪಕ ನೀರಿಲ್ಲ. ಭತ್ತ, ಕಬ್ಬು, ಗೋವಿನಜೋಳ ಮೊದಲಾದ ಬೆಳೆ ಮತ್ತು ದನಕರುಗಳಿಗೆ ನೀರಿನ ಅವಶ್ಯವಿದೆ. ನಿರಂತರ 7 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಹೆಸ್ಕಾಂ ಇಇ ರಾಜೇಶ ಕಲ್ಯಾಣಶೆಟ್ಟರ ಭೇಟಿ ನೀಡಿ, ವಿದ್ಯುತ್ ಉತ್ಪಾದನೆ ಕೊರತೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ತ್ರೀಫೇಸ್ ವಿದ್ಯುತ್ ಪೂರೈಕೆಗೆ ಅಡಚಣೆಯಾಗಿದೆ. ವಿದ್ಯುತ್ ಉತ್ಪಾದನೆ ಕೊರತೆ ನಿವಾರಿಸುವ ಬಗ್ಗೆ ಹಿರಿಯ ಅಧಿಕಾರಿ ಜತೆಗೆ ಚರ್ಚಿಸಲಾಗಿದೆ. ಅ.9ರಿಂದ ಎಂದಿನಂತೆ ನಿರಂತರ 7 ತಾಸು ತ್ರೀಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷರಾದ ವೀರನಗೌಡ ಪಾಟೀಲ, ವಿಠ್ಠಲ ಗಣಾಚಾರಿ, ರೈತ ಸಂಘ ತಾಲೂಕಾಧ್ಯಕ್ಷ ಶರಣಪ್ಪ ಕಂಬಳಿ, ಮಂಜುನಾಥ ಹಂಚಿನಾಳ, ಎಚ್.ಬಿ. ಕುರಿ, ಗುಡದಪ್ಪ ದೇಸಾಯಿ, ಶರಣಪ್ಪ ಚೆನ್ನಳ್ಳಿ, ಈರಣ್ಣ ಕವಲೂರ, ಗರಡಪ್ಪ ಜಂತ್ಲಿ, ದೇವಪ್ಪ ಚಿಕ್ಕಣ್ಣವರ, ಬೀರಪ್ಪ ಮಲಾರ್ಜಿ, ಚಂದ್ರಪ್ಪ ಗದ್ದಿ, ಬಾಬುಜೀ ಮದ್ಯಪಾಟಿ, ಅಶೋಕ ಸಿಗೇನಹಳ್ಳಿ, ಪರಸಪ್ಪ ಹೈತಾಪುರ, ಅಂದಪ್ಪ ಮೇಟಿ, ಮುತ್ತಣ್ಣ ಗೌಡರ, ಶಿವು ಅಳವಂಡಿ, ದೇವಪ್ಪ ಡೊಣ್ಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net