

ದೇವದುರ್ಗ: ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹುಣ್ಣಿಮೆ ನಿಮಿತ್ತ ಎತ್ತು, ಆಕಳು, ಎಮ್ಮೆಗಳಿಗೆ ಅಲಂಕರಿಸಿ ಪೂಜೆ ಮಾಡಲಾಯಿತು.
ಕುರಿಗಾಹಿಗಳು ಕುರಿ, ಆಡು, ಟಗರಿಗೆ ವಿವಿಧ ಅಲಂಕಾರ ಮಾಡಿ ಟಗರು, ಹೋತಿನ ಕೋಡಿಗೆ ಬಣ್ಣ ಬಳಿದರು. ಎತ್ತುಗಳಿಗೆ ಎರಡೂ ಕೋಡಿಗೆ ವಿವಿಧ ಬಣ್ಣ, ಮೈಮೇಲೆ ಗುಲಾಲ್‌ನಿಂದ ವಿವಿಧ ಚಿತ್ರ ಬಿಡಿಸಿದ್ದರು. ಕೋಡಿಗೆ ಅಲಂಕಾರಿಕ ವಸ್ತುಗಳನ್ನು ಕಟ್ಟಿದ್ದರು. ಇನ್ನು ಎಮ್ಮೆಗಳ ಒಂದು ಕೋಡಿಗೆ ಬಣ್ಣ, ಇನ್ನೊಂದು ಕೋಡಿಗೆ ಸುಣ್ಣ ಬಳಿದು ಸಂಪ್ರದಾಯ ಪ್ರಕಾರ ಅಲಂಕಾರ ಮಾಡಿ ಬಸವನಿಗೆ ನಮಿಸಿದರು.
ನಗರಗುಂಡ, ಗಬ್ಬೂರು, ಗಲಗ, ಜಾಲಹಳ್ಳಿ, ಮುಂಡರಗಿ, ಬುಂಕಲದೊಡ್ಡಿ, ಗಾಣಧಾಳ, ಸೋಮನಮರಡಿ, ಜೋಳದಹೆಡಗಿ ಸೇರಿ ವಿವಿಧೆಡೆ ರೈತರು ಕರಿ ನಿಮಿತ್ತ ಬೆಳಗ್ಗೆ ಎತ್ತುಗಳಿಗೆ ಮೈತೊಳೆದು ಅಲಂಕರಿಸಿ ಪೂಜೆ ಸಲ್ಲಿಸಿದರು. ಸಂಜೆ ಜೋಡೆತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ಸಂಭ್ರಮಿಸಿದರು. ಹಬ್ಬದ ನಂತರ ಕೃಷಿ ಚಟುವಟಿಕೆಗಳು ಆರಂಭವಾಗಲಿದ್ದು ಬಿತ್ತನೆ ನಿಮಿತ್ತ ಸಂಭ್ರಮಿಸಿದರು.
ಕಾರ ಹುಣ್ಣಿಮೆ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೆ ಪ್ರತಿ ಅಮಾವಾಸ್ಯೆಗೆ ಎತ್ತುಗಳಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಹಿಂದೆ ಎಲ್ಲ ಎತ್ತುಗಳ ಮೈತೊಳೆದು ಅಲಂಕಾರ ಮಾಡಿ ಸಂಜೆ ಕರಿ ಹರಿದು ಓಡಲು ಬಿಡಲಾಗುತ್ತಿತ್ತು. ಮೊದಲು ಬಂದ ಎತ್ತುಗಳಿಗೆ ಹೂವಿನಹಾರ ಹಾಕಿ ಸನ್ಮಾನಿಸಲಾಗುತ್ತಿತ್ತು. ಆದರೆ, ಇಂದು ಎತ್ತುಗಳು ಮರೆಯಾಗಿವೆ. ಹೀಗಾಗಿ ಸಂಪ್ರದಾಯ ಕೂಡ ಕಡಿಮೆಯಾಗಿದೆ ಎಂದು ನಗರಗುಂಡದ ರೈತ ಉಮಾಪತಿಗೌಡ ಕಳವಳ ವ್ಯಕ್ತಪಡಿಸಿದರು.