ಕೇಬಲ್ ಕಳ್ಳನ ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತರು

01-GPT-3
ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಜಮೀನಿನಲ್ಲಿ ಸಿಕ್ಕಿದ ಆರೋಪಿ.
Published on

ಗುಂಡ್ಲುಪೇಟೆ : ತಾಲೂಕಿನ ಮಳವಳ್ಳಿ ಸುತ್ತಮುತ್ತಲಿನ ಗ್ರಾಮಗಳ ಪಂಪ್‌ಸೆಟ್‌ಗಳಲ್ಲಿ ಕೇಬಲ್ ಕಳ್ಳತನ ಮಾಡುತ್ತಿದ್ದ ಗುಂಪಿನಲ್ಲಿದ್ದ ಒಬ್ಬನನ್ನು ಬುಧವಾರ ಬೆಳಗ್ಗೆ ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಮಿಳುನಾಡಿನ ಸೇಲಂ ಮೂಲದ ಜಗದೀಶ್ ಬಂಧಿತ ಆರೋಪಿ.
ಕೆಲ ದಿನಗಳಿಂದ ಕೇಬಲ್ ಕಳ್ಳರು ಮಳವಳ್ಳಿ, ಮಾಡ್ರಹಳ್ಳಿ, ವೀರನಪುರ, ಮಡಹಳ್ಳಿ ಮುಂತಾದ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚಿನ ಪಂಪ್‌ಸೆಟ್‌ಗಳಲ್ಲಿ ಕಳ್ಳತನ ಮಾಡಿದ್ದರು. ಕಳ್ಳರ ಪತ್ತೆಗೆ ಪೊಲೀಸರು ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ.
ಬುಧವಾರ ನಸುಕಿನಲ್ಲಿ ಮಳವಳ್ಳಿ ಗ್ರಾಮದ ಭೋಗಪ್ಪ ಅವರ ಜಮೀನಿಗೆ ಮೂವರ ತಂಡ ಆಗಮಿಸಿದ್ದನ್ನು ಅಂಕಪ್ಪ ಹಾಗೂ ಸ್ವಾಮಿ ಅವರು ಗಮನಿಸಿ ಅಕ್ಕಪಕ್ಕದ ರೈತರ ಸಹಕಾರದಿಂದ ದಾಳಿ ಮಾಡಿದ್ದಾರೆ. ರೈತರನ್ನು ಕಂಡ ಕೂಡಲೇ ಇಬ್ಬರು ಕತ್ತಲಿನಲ್ಲಿ ಪರಾರಿಯಾಗಿದ್ದು, ಈ ವೇಳೆ ಒಬ್ಬನನ್ನು ಹಿಡಿದು ಪಟ್ಟಣದ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net