

ಸೋರಲಮಾವು ಶ್ರೀಹರ್ಷ ತುಮಕೂರು ಕುಣಿಗಲ್ ತಾಲೂಕು ಹಂಗರಹಳ್ಳಿಯಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಭೂಮಿ ಮುಂಜೂರಾಗಿದ್ದರೂ 25 ರೈತರಿಗೆ ನಾಲ್ಕು ವರ್ಷದಿಂದ ಸಾಗುವಳಿ ಚೀಟಿ ನೀಡದೆ ಸತಾಯಿಸಲಾಗುತ್ತಿದೆ. ಹಂಗರಹಳ್ಳಿ ಸ.ನಂ 46ರಲ್ಲಿ 51.34 ಎಕರೆ ಜಮೀನು ಉಳುಮೆ ಮಾಡುತ್ತಿರುವ 25 ರೈತರಿಗೆ 2018 ಜ.1ರಂದು ಮಂಜೂರು ಮಾಡಲಾಗಿದ್ದರೂ ರಾಜಕೀಯ ಕಾರಣಕ್ಕೆ ಚೀಟಿ ನೀಡದೆ ತಡಮಾಡಲಾಗುತ್ತಿದೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ. ಜೆಡಿಎಸ್ ಶಾಸಕ ಡಿ.ನಾಗರಾಜಯ್ಯ ಶಾಸಕರಾಗಿದ್ದ 2018ರ ಸಂದರ್ಭದಲ್ಲಿ 25 ರೈತರಿಗೆ ಭೂಮಿ ಮಂಜೂರಾಗಿದೆ. ಆ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಎಚ್.ಡಿ.ರಂಗನಾಥ್ ಶಾಸಕರಾಗಿದ್ದು ರಾಜಕೀಯ ಕಾರಣಕ್ಕಾಗಿಯೇ ಚೀಟಿ ನೀಡದೆ ಸತಾಯಿಸಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಸಾಗುವಳಿ ಚೀಟಿಗಾಗಿ ಈ ಭಾಗದ ರೈತರು ತಹಸೀಲ್ದಾರ್ ಕಚೇರಿಗೆ ಅಲೆದು ಜಿಲ್ಲಾಧಿಕಾರಿಗೂ ದೂರು ನೀಡಿ ಅವರಿಂದ ಸೂಚನೆ ಕೊಡಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ರೈತರು ಲೋಕಾಯುಕ್ತ ಕೋರ್ಟ್ ಮೊರೆಹೋಗಿದ್ದು ನ್ಯಾಯಕ್ಕಾಗಿ ಕಾದಿದ್ದಾರೆ. 51.34 ಎಕರೆ ಜಮೀನು ಪಡೆದಿರುವ ರೈತರು ಸಾಕಷ್ಟು ವರ್ಷದಿಂದ ಉಳುಮೆ ಮಾಡಿಕೊಂಡು ಬೆಳೆ ಬೆಳೆದು ಬದುಕುತ್ತಿದ್ದಾರೆಯಾದರೂ ಭೂಮಿಯ ದಾಖಲೆಗಳಿಲ್ಲದೆ ಸರ್ಕಾರದ ಯಾವ ಸೌಲಭ್ಯವನ್ನೂ ಪಡೆಯಲು ಸಾಧ್ಯವಾಗಿಲ್ಲ. ಗಂಗಕಲ್ಯಾಣ ಯೋಜನೆ, ಕೃಷಿ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಸೌಲಭ್ಯ ಪಡೆಯಲು ಸಾಧ್ಯವಾಗದೆ ಕಷ್ಟನಷ್ಟದಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಭೂಮಿ ಅಭಿವೃದ್ಧಿಪಡಿಸಲು ಬ್ಯಾಂಕ್‌ಗಳು ದಾಖಲೆಗಳಿಲ್ಲದೆ ಸಾಲ ನೀಡದಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ನಿಯಮಾನುಸಾರ ಮಂಜೂರಾಗಿರುವ ಜಮೀನಿಗೆ ಸಾಗುವಳಿ ಚೀಟಿ ವಿತರಣೆಗೆ ಸ್ಥಳೀಯ ರಾಜಕೀಯ ಕಾರಣ ಎನ್ನಲಾಗಿದ್ದು, ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಕ್ಕೆ ಕಾಣದ ಕೈ ಅಡ್ಡಿಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೂಗು ಎದ್ದಿದೆ.
ಸಮಿತಿಯಲ್ಲಿ ಮಂಜೂರಾತಿ ಪಡೆದಿರುವ ಜಮೀನುಗಳಿಗೆ ಸಾಗುವಳಿ ಚೀಟಿ ನೀಡಲು ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೇನೆ, ಈ ಪ್ರಕರಣದಲ್ಲಿ ತಡವಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಸೂಕ್ತಕ್ರಮವಹಿಸಲು ಮತ್ತೊಮ್ಮೆ ಸೂಚನೆ ನೀಡುತ್ತೇನೆ ವಿ.ಅಜಯ್ ಉಪವಿಭಾಗಾಧಿಕಾರಿ 25 ರೈತರಿಗೆ ಹಂಗರಹಳ್ಳಿ ಸ.ನಂ46ರಲ್ಲಿ 51.34 ಎಕರೆ ಜಮೀನು ಮುಂಜೂರು ಮಾಡಲಾಗಿದ್ದು, ಜಮೀನಿನ ಕಿಮ್ಮತ್ತು, ಟಿಟಿ ಮತ್ತಿತರರ ಶುಲ್ಕಗಳನ್ನು ಪಾವತಿಸಿ ನಾಲ್ಕು ವರ್ಷ ಕಳೆದರೂ ಸಾಗುವಳಿ ಚೀಟಿ ನೀಡದೆ ಸತಾಯಿಸಲಾಗುತ್ತಿದೆ. ದಾಖಲೆಗಳಿಲ್ಲದೆ ಸರ್ಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ರಂಗಸ್ವಾಮಿ, ರೈತ