ಕುಮದ್ವತಿಗೆ ನೀರು ಹರಿಸಿದ ರೈತ

RTL STORY
Published on

ರಟ್ಟಿಹಳ್ಳಿ: ಕೆರೆ, ನದಿ ಬರಿದಾಗಿರುವುದರಿಂದ ಪ್ರಾಣಿ-ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ಅರಿತಿರುವ ಚಪ್ಪರದಹಳ್ಳಿ ಗ್ರಾಮದ ರೈತ ಶೇಖರ ಬಣಕಾರ ಅವರು ತಮ್ಮ ಜಮೀನಿನ ಕೊಳವೆಬಾವಿಗಳಿಂದ ನದಿಗೆ ನೀರು ಹರಿಸುತ್ತಿದ್ದಾರೆ.

ತಾಲೂಕಿನ ಚಿಕ್ಕಮೊರಬ ಗ್ರಾಮ ವ್ಯಾಪ್ತಿಯಲ್ಲಿ ಶೇಖರ ಬಣಕಾರ ಅವರು 4 ಎಕರೆ ಜಮೀನಿನಲ್ಲಿ ಕೊಳವೆಬಾವಿ ನೀರಿನ ಆಶ್ರಯದಲ್ಲಿ ಅಡಕೆ ತೋಟ ಮಾಡಿದ್ದಾರೆ. ಕೃಷಿಯೊಂದಿಗೆ ವಕೀಲ ವೃತ್ತಿ ಮಾಡುತ್ತಿದ್ದಾರೆ.

ಶೇಖರ ಬಣಕಾರ ಅವರು ಇತ್ತೀಚೆಗೆ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತ ನದಿ ದಂಡೆಯತ್ತ ಬಂದಾಗ ನೀರಿಲ್ಲದೆ ನವಿಲು ಮತ್ತು ಕೋತಿ ಹಿಂಡು, ಜಾನುವಾರುಗಳು ಪರಿತಪಿಸುತ್ತಿದ್ದವು. ಕುರಿಗಾಹಿಗಳು ಸುಮಾರು 300 ರಿಂದ 500 ಕುರಿಗಳನ್ನು ನೀರು ಕುಡಿಸಲು ತಂದಾಗ ನದಿಯಲ್ಲಿ ನೀರಿಲ್ಲದ್ದರಿಂದ ಹಾಗೆ ತೆರಳಿದರು. ಈ ವೇಳೆ ಕುರಿಗಾಹಿಗಳು ನದಿಯಲ್ಲಿ ನೀರು ಇಲ್ಲದಿರುವುದರಿಂದ ಕುರಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದರು.

ಚಿತ್ರದುರ್ಗದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಅನೇಕ ಕೆರೆಗಳಿಗೆ ನೀರು ತುಂಬಿಸಿ, ಜನ-ಜಾನುವಾರುಗಳಿಗೆ ಅನುಕೂಲ ಮಾಡಿದ್ದನ್ನು ಶೇಖರ ಬಣಕಾರ ಗಮನಿಸಿದ್ದರು. ಶ್ರೀಗಳ ಕಾರ್ಯದ ಪ್ರೇರಣೆಯೊಂದಿಗೆ ತಮ್ಮ ಜಮೀನಿನಲ್ಲಿನ ಸುಮಾರು 3 ಇಂಚಿಗೂ ಅಧಿಕ ನೀರಿರುವ ಕೊಳವೆಬಾವಿಗಳಿಂದ ಕುಮದ್ವತಿ ನದಿಗೆ ಕಳೆದ 8 ದಿನಗಳಿಂದ ನಿತ್ಯವೂ 8 ಗಂಟೆ ನೀರು ಹರಿಸುತ್ತಿದ್ದಾರೆ. ಸದ್ಯ ನದಿಯಲ್ಲಿ ನೀರು ಸಂಗ್ರಹವಾಗಿದ್ದು, ಪ್ರಾಣಿ- ಪಕ್ಷಿಗಳಿಗೆ ಅನುಕೂಲವಾಗಿದೆ.

ಸ್ಥಗಿತವಾಗಿದ್ದ ಬೋರ್‌ವೆಲ್‌ನಲ್ಲಿ ನೀರು

ಹೊಲದಲ್ಲಿನ ಒಂದು ಬೋರ್‌ವೆಲ್ ಕಳೆದ 30 ವರ್ಷಗಳಿಂದ ಸ್ಥಗಿತವಾಗಿತ್ತು. ಕಳೆದ 4 ವರ್ಷಗಳ ಹಿಂದೆ ಕೊಳವೆಬಾವಿ ಪರಿಶೀಲಿಸಿದಾಗ ನೀರು ಇರುವುದು ಗಮನಕ್ಕೆ ಬಂದು ಮೋಟರ್ ವ್ಯವಸ್ಥೆ ಮಾಡಲಾಗಿದೆ. ಕಳೆದ 4 ವರ್ಷಗಳಿಂದ 3 ಇಂಚು ನೀರು ಲಭ್ಯವಾಗುತ್ತಿದೆ. ಅಕ್ಕಪಕ್ಕದ ಅನೇಕ ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದಿದ್ದರೂ, ರೈತ ಶೇಖರ ಅವರ ಹೊಲದಲ್ಲಿನ ಈ ಕೊಳವೆಬಾವಿಯಲ್ಲಿ ಉತ್ತಮವಾಗಿ ನೀರು ಬರುತ್ತಿರುವುದು ಅವರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಕುಮದ್ವತಿ ನದಿ ಸಂಪೂರ್ಣ ಬರಿದಾಗಿದೆ. ಅನೇಕ ಪ್ರಾಣಿ ಪಕ್ಷಿಗಳು ನದಿಗೆ ಆಗಮಿಸಿ ನೀರಿಗಾಗಿ ಪರಿತಪಿಸುತ್ತಿರುವುದನ್ನು ನೋಡಿ ಬೇಸರವಾಗಿತ್ತು. ಆದ್ದರಿಂದ ಕೊಳವೆಬಾವಿಯಿಂದ ನದಿಗೆ ನೀರು ಬಿಟ್ಟಿದ್ದರಿಂದ ಉತ್ತಮವಾಗಿ ನೀರು ಸಂಗ್ರಹವಾಗುತ್ತಿದೆ. ಮಾಸೂರು ಭಾಗದಿಂದ ಮಾಕನೂರ ಭಾಗದವರೆಗೆ ನದಿಯ ದಂಡೆಯ ರೈತರು ನದಿಗೆ ಕೆಲ ಹೊತ್ತು ನೀರು ಹರಿಸಿದರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುತ್ತದೆ. ರೈತರ ಪಂಪ್‌ಸೆಟ್‌ಗಳಿಗೆ 2 ಗಂಟೆ ಹೆಚ್ಚುವರಿ ವಿದ್ಯುತ್ ಪೂರೈಸಲು ಅಧಿಕಾರಿಗಳು ಮುಂದಾಗಬೇಕು ಎಂಬುದು ನಮ್ಮ ಮನವಿ. ಶೇಖರ ಬಣಕಾರ, ರೈತ ಚಪ್ಪರದಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net