

ರೋಣ: ಜೂನ್ ತಿಂಗಳು ಮುಗಿಯುತ್ತ ಬಂದರೂ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿಲ್ಲ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದ ಸುರಿದಿಲ್ಲ. ಹೀಗಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ರೈತ ಸಮೂಹ ಆತಂಕದಲ್ಲಿದೆ.
ಸಾಮಾನ್ಯವಾಗಿ ರೈತರು ಮೇ ಕೊನೆಯ ವಾರದಿಂದ ಜುಲೈ ಅಂತ್ಯದವರೆಗೆ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ಬಾರಿ ಹಲವೆಡೆ ಕೃಷಿ ಚಟುವಟಿಕೆಗಳೇ ಆರಂಭವಾಗಿಲ್ಲ. ಯುಗಾದಿಗೆ ಮಳೆಗಾಲ ಆರಂಭವಾಗಿದ್ದರೂ ಅಲ್ಪ ಸ್ವಲ್ಪ ಮಳೆಯಿಂದ ಹೊಲವನ್ನು ಬಿತ್ತನೆಗೆ ಸಜ್ಜು ಮಾಡಿದ್ದರು. ಅಲ್ಲದೆ, ಬೀಜ ಮತ್ತು ಗೊಬ್ಬರ ಖರೀದಿಸಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ರೈತರು ಕೈಕಟ್ಟಿ ಕುಳಿತಿದ್ದಾರೆ.
ಮುಂಗಾರು ಬಿತ್ತನೆಗೆ ರೈತರು ರೋಹಿಣಿ ಮಳೆಯನ್ನು ನಂಬಿದ್ದರು. ಆಕಾಶದಲ್ಲಿ ಮೋಡಗಳು ಕರಿಗಟ್ಟದೇ ಬರೀ ಗಾಳಿ ಬೀಸಿ ಮೋಡಗಳು ಮಾಯವಾದವು. ನೈಋತ್ಯ ಮುಂಗಾರಿನಿಅದ ಮೃಗಶಿರಾ ಮಳೆ ಆರಂಭವಾಗಬೇಕಿತ್ತು. ಆದರೆ, ವಾತಾವರಣ ಬಿಸಿಲಿನಿಂದ ಕೂಡಿದ್ದು, ಆಕಾಶದಲ್ಲಿ ಮೋಡಗಳಿದ್ದರೂ ಬಲವಾದ ಗಾಳಿಯಿಂದ ಮೋಡಗಳು ಮಾಯವಾಗಿ ಮಳೆಯೇ ಇಲ್ಲದಂತಾಗಿದೆ.
ಬಿತ್ತನೆಗುರಿ:
ತಾಲೂಕಿನಲ್ಲಿ ಹೆಸರು 37,750 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 7,507 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೆಕ್ಕಜೋಳ 10,200 ಹೆಕ್ಟೇರ್‌ನಲ್ಲಿ 540 ಹೆಕ್ಟೇರ್, ಶೇಂಗಾ 3,250 ಹೆಕ್ಟರ್‌ನಲ್ಲಿ 217ಹೆಕ್ಟೇರ್ ಬಿತ್ತನೆಯಾಗಿದೆ. ಕಳೆದ ವರ್ಷ ಮುಂಗಾರು ಪೂರ್ವದಲ್ಲೇ ನಿರೀಕ್ಷೆಗಿಂತ ಅಧಿಕ ಮಳೆ ಸುರಿದಿತ್ತು. ಪ್ರಸ್ತುತ ವರ್ಷ ಜೂ.15ರವರೆಗೆ 161.6 ಮಿಮೀ ಮಳೆಯಾಗಬೇಕಿದ್ದು, 98.81 ಮಿಮೀ ಮಳೆಯಾಗಿದೆ. ಜನವರಿಯಿಂದ ಜೂ.16 ರವರೆಗೆ ಶೇ. 58ರಷ್ಟು ಮಳೆಯ ಕೊರತೆಯಾಗಿದೆ. ಇತ್ತ ಕೃಷಿ ಇಲಾಖೆಯು ತಾಲೂಕಿಗೆ ಬೇಕಾಗುವಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿರಿಸಿಕೊಂಡಿದೆ.