ಎಚ್ಚರ ತಪ್ಪಿದ್ರೆ ಕೃಷಿ ಹೊಂಡದಿಂದ ಆಪತ್ತು, ಸುರಕ್ಷತಾ ಕ್ರಮಗಳಿಲ್ಲದೆ ಕಂಟಕ, ಮುಂಜಾಗ್ರತೆಗೆ ಕೃಷಿ ಇಲಾಖೆ ಮನವಿ

22 Krishi honda
Published on

ಶಿವರಾಜ ಎಂ. ಬೆಂ. ಗ್ರಾಮಾಂತರ

ಕೃಷಿ ಚಟುವಟಿಕೆಗಳಿಗೆ ವರವಾಗಿರುವ ಕೃಷಿಹೊಂಡಗಳೇ ರೈತರ ಪ್ರಾಣಕ್ಕೆ ಕಂಟಕವಾಗುತ್ತಿವೆಯೇ? ಇತ್ತೀಚಿನ ದಿನಗಳಲ್ಲಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಇಂಥಹದ್ದೊಂದು ಆತಂಕಕ್ಕೆ ಕಾರಣವಾಗಿದೆ. ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಮುಳಬಾಗ ಗ್ರಾಮದಲ್ಲಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿರುವ ಪ್ರಕರಣ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿದೆ. ಇಂಥ ದುರ್ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ಕೃಷಿ ಇಲಾಖೆ ಮನವಿ ಮಾಡಿದೆ.

ಬಹುತೇಕ ಜಮೀನುಗಳಲ್ಲಿ ಸಾಕಷ್ಟು ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಆಕಸ್ಮಿಕವಾಗಿ ಕಾಲುಜಾರಿ ಬಿದ್ದರೂ ಸುಲಭವಾಗಿ ಮೇಲೆ ಬರಲು ಸಾಧ್ಯವಿಲ್ಲ. ಕೃಷಿಹೊಂಡಕ್ಕೆ ಟಾರ್ಪಾಲಿನ್ ಹೊದಿಕೆಯಿರುವುದರಿಂದ ಜಾರುತ್ತದೆ. ಬಿದ್ದರೆ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ.

ಯೋಜನೆ ಬಳಸಿಕೊಂಡಿಲ್ಲ: ಕೃಷಿಹೊಂಡ ನಿರ್ಮಾಣ ಯೋಜನೆಯಡಿ ಹೊಂಡದ ಸುತ್ತ ತಂತಿಬೇಲಿ, ಪೆನ್ಸಿಂಗ್ ನಿರ್ಮಾಣಕ್ಕೆ ಸಹಾಯಧನ ದೊರೆಯುತ್ತದೆ. ಆದರೆ ರೈತರು ಇದನ್ನು ನಿರ್ಲಕ್ಷಿಸುತ್ತಾರೆ. ಯಾರೂ ಪೆನ್ಸಿಂಗ್ ನಿರ್ಮಾಣಕ್ಕೆ ಕಾಳಜಿ ತೋರುವುದಿಲ್ಲ ಎಂಬುದು ಇಲಾಖೆ ಆರೋಪ.

ಮಕ್ಕಳ ಬಗ್ಗೆ ಎಚ್ಚರವಿರಲಿ: ಶಾಲೆಗಳಿಗೆ ಸುದೀರ್ಘ ರಜೆ ಘೋಷಣೆಯಾಗಿರುವುದರಿಂದ ಮಕ್ಕಳು ಈಜಲು ಹೊಂಡಗಳಿಗೆ ಮುಗಿಬೀಳುವುದು ಕಂಡು ಬರುತ್ತಿದೆ. ಈಜು ಬರುವವರೇ ಸುಲಭವಾಗಿ ಮೇಲೆ ಬರಲು ಸಾಧ್ಯವಿಲ್ಲದಂತಿರುವ ಹೊಂಡಗಳಿಗೆ ಈಜಲು ಬಾರದವರು ಇಳಿದರೆ ಪ್ರಾಣಕ್ಕೆ ಸಂಚಕಾರವಾಗುವ ಸಾಧ್ಯತೆ ಹೆಚ್ಚಿದೆ.

ಕೃಷಿ ಇಲಾಖೆ ಸಲಹೆಗಳೇನು? * ಹೊಂಡದ ಸುತ್ತ ತಂತಿಬೇಲಿ, ಪೆನ್ಸಿಂಗ್ ಅಳವಡಿಸಬೇಕು. * ಕೃಷಿ ಹೊಂಡಗಳ ನಾಲ್ಕೂ ಭಾಗದಲ್ಲಿ ಹಗ್ಗಗಳನ್ನು ಇಳಿ ಬಿಡಬೇಕು. * ಗಾಳಿ ತುಂಬಿರುವ ಟ್ಯೂಬ್ಗಳನ್ನು ಸದಾಕಾಲ ಹೊಂಡಗಳಲ್ಲಿ ತೇಲಿ ಬಿಟ್ಟಿರಬೇಕು. * ಸಾಧ್ಯವಾದಲ್ಲಿ ಹೊಂಡದ ಸುತ್ತ ಎತ್ತರದ ಗೋಡೆ ನಿರ್ಮಿಸಬೇಕು. * ಮಹಿಳೆಯರು, ಮಕ್ಕಳು ಹೊಂಡಗಳತ್ತ ಹೋಗದಂತೆ ಎಚ್ಚರಿಕೆ ವಹಿಸಬೇಕು.

ಕೃಷಿ ಹೊಂಡಗಳ ಸುತ್ತ ಸುರಕ್ಷತಾ ಕ್ರಮ ಅಳವಡಿಸಬೇಕು. ಸ್ಥಳೀಯವಾಗಿ ಸಿಗುವ ಮರ, ತೆಂಗಿನ ಗರಿ ಬಳಸಿಯಾದರೂ ರಕ್ಷಣೆ ಕ್ರಮ ಕೈಗೊಳ್ಳಬೇಕು. ಯಾರೂ ಸುಲಭವಾಗಿ ಪ್ರವೇಶಿದಂತೆ ಎಚ್ಚರಿಕೆ ವಹಿಸಬೇಕು. ತಂತಿ ಬೇಲಿ, ಪೆನ್ಸಿಂಗ್ ಮೂಲಕ ಹೊಂಡಗಳತ್ತ ಯಾರೂ ಹೋಗದಂತೆ ಮುಂಜಾಗ್ರತೆ ಅನುಸರಿಸಬೇಕು. ಜಯಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net