ಕೃಷಿ ಮೇಳ ಆಯೋಜನೆ ಉತ್ತಮ ಕಾರ್ಯ

21arsph1ep (1)
Published on

ಅರಸೀಕೆರೆ: ವಿಜಯವಾಣಿ ಹಾಗೂ ದಿಗ್ವಿಜಯ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಶುಕ್ರವಾರ ತಾಲೂಕಿನ ರೈತರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕೃಷಿ ಪರಿಕರ, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ ಬಳಕೆ, ತೆಂಗುನಾರಿನ ಉತ್ಪನ್ನ, ರೇಷ್ಮೆ, ಗೋತಳಿ ಮಳಿಗೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡರು.

ರೈತ ಸಂಘದ ತಾಲೂಕು ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ಮಾತನಾಡಿ, ಕೃಷಿಕನ ಬದುಕು ಹಸನುಗೊಳಿಸುವ ಅನಿವಾರ್ಯತೆ ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ರಾಜ್ಯಮಟ್ಟದ ಕೃಷಿಮೇಳ ಆಯೋಜಿಸಿರುವುದು ಪ್ರಶಂಸನೀಯ. ಮೇಳದಲ್ಲಿ ಉಪಯುಕ್ತ ಸಲಹೆ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಮುಖಂಡ ಬೋರನಕೊಪ್ಪಲು ಶಿವಲಿಂಗಪ್ಪ ಮಾತನಾಡಿ, ಸರ್ಕಾರದ ಜತೆಗೆ ಉದ್ಯಮಿ ವಿಜಯಸಂಕೇಶ್ವರ ಅವರು ರೈತರ ಕನಸು ಸಾಕಾರಗೊಳಿಸಲು ಹೊರಟಿರುವುದು ಸಂತಸದ ಸಂಗತಿ. ಇಂತಹ ಹಲವು ರೈತಪರ ಮೇಳಗಳು ರಾಜ್ಯದಲ್ಲಿ ನಡೆಯಲಿ ಎಂದು ಆಶಿಸಿದರು.

ನಗರದ ಬಸ್ ನಿಲ್ದಾಣದಲ್ಲಿ ಕೃಷಿಮೇಳಕ್ಕೆ ತೆರಳಲು ಸಜ್ಜಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗೆ ಮಾವಿನ ತೋರಣ, ಬ್ಯಾನರ್ ಕಟ್ಟಲಾಯಿತು. ಮುಖಂಡರಾದ ಅಣ್ಣಾಯ್ಕನಹಳ್ಳಿ ಶಿವಮೂರ್ತಿ,ರಾಜು, ರಮೇಶ್, ಕನಕಂಚೇನಹಳ್ಳಿ ಪ್ರಸನ್ನಕುಮಾರ್, ತುಂಬಾಪುರ ಸಿದ್ದೇಶ್, ಸ್ವಾಮಿ, ಗುರುಶಾಂತಪ್ಪ, ಸಿದ್ದಯ್ಯ, ಗಂಗಾಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net