

ಸಿಂಧನೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ಜು.5 ರಂದು ನಡೆದ ಸಭೆಯಲ್ಲಿ ಯಾವುದೇ ಗಲಾಟೆ ಆಗದಿದ್ದರೂ, ಸುಖಾಸುಮ್ಮನೆ ಅಲೆಮಾರಿ ಸಮುದಾಯದ ಏಳು ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಆ.14 ರಂದು ನಮ್ಮ ಕೇರಿಗೆ ಭೇಟಿ ನೀಡಲು ಬರುತ್ತಿರುವ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರ ವಿರುದ್ಧ ಧಿಕ್ಕಾರ ಕೂಗಲಾಗುವುದು ಎಂದು ರಾಜ್ಯ ಅಲೆಮಾರಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಮಹಾಂತೇಶ ಸಂಕಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಸಭೆ ಏರ್ಪಡಿಸಲಾಗಿತ್ತು. ಸಭೆಗೆ 49 ಸಮುದಾಯದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಎಸ್ಸಿ,ಎಸ್ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಆಪ್ತ ಕಾರ್ಯದರ್ಶಿಯನ್ನು ಆಹ್ವಾನಿಸಿಲ್ಲ. ಆದರೂ, ಸಭೆಗೆ ಬಂದಾಗ ಗೌರವ ನೀಡಿ ವೇದಿಕೆಗೆ ಆಹ್ವಾನಿಸಿದ್ದೆವು.
ಸಭೆಯಲ್ಲಿ ಮುಖಂಡರು ಮಾತನಾಡುವಾಗ ನಿಗಮದ ಅಧ್ಯಕ್ಷೆ, ಆಪ್ತ ಕಾರ್ಯದರ್ಶಿ ಅಡ್ಡಿಪಡಿಸಿ ಸಭೆ ಮೊಟಕುಗೊಳಿಸಲು ಮುಂದಾಗಿದ್ದರು. ಅಲ್ಲದೆ ಊಟದ ಸಂದರ್ಭದಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಸಮುದಾಯದ ಮುಖಂಡರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಸಮುದಾಯದ ಮುಖಂಡರು ಗಲಾಟೆ ಮಾಡದಿದ್ದರೂ ಏಳು ಜನರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬೆದರಿಕೆ ಹಾಕಿದ್ದಾರೆ. ಕೂಡಲೇ ಪ್ರಕರಣ ಹಿಂಪಡೆಯಬೇಕು. ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಮೋತಿ, ಶಿಳ್ಳೇಕ್ಯಾತ ಸಮಾಜದ ಸುರೇಶ ಕಟ್ಟಿಮನಿ, ಸುಡುಗಾಡು ಸಿದ್ಧ ಸಮಾಜದ ಅಮರೇಶ ಹಸಮಕಲ್, ಶ್ಯಾಮಣ್ಣ ಸಿಂಧೋಳ್ಳಿ, ಯಲ್ಲಪ್ಪ ಜವಳಗೇರಾ, ದೊಡ್ಡ ಜಂಬಯ್ಯ ಇದ್ದರು.