

ಬೇಲೂರು: ತಾಲೂಕಿನ ಅರೇಹಳ್ಳಿಯ ಸಂತೇ ಕಾಳಮ್ಮ ದೇವಸ್ಥಾನ ಸಮಿತಿಯಿಂದ ಸಂತೇ ಕಾಳಮ್ಮ, ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ 21ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಸಂಪನ್ನವಾಯಿತು.
ಎರಡು ದಿನಗಳ ಕಾಲ ನಡೆದ ಸಂತೇ ಕಾಳಮ್ಮ, ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಸೋಮವಾರ ಮಠದ ಬಾವಿಯ ಬಳಿಗೆ ಅಮ್ಮನವರನ್ನು ಕರೆತಂದು ಗಂಗಾ ಪೂಜೆ ಸಲ್ಲಿಸಲಾಯಿತು. ನಂತರ 101 ಕುಂಭ ಕಳಸಗಳೊಂದಿಗೆ ಸಾಗಿದ ಮಹಿಳೆಯರು ದೇವಸ್ಥಾನ ಪ್ರವೇಶಿಸಿದರು. ಇದೇ ಸಂದರ್ಭ ನಡೆ ಮುಡಿ ಉತ್ಸವದೊಂದಿಗೆ ಅಮ್ಮನವನರನ್ನು ಹೊತ್ತ ಅಡ್ಡಪಲ್ಲಕ್ಕಿಯೂ ವಾದ್ಯ ಗೋಷ್ಠಿಯೊಂದಿಗೆ ದೇಗುಲವನ್ನು ತಲುಪಿದ ಬಳಿಕ ದೇಗುಲದಲ್ಲಿ ಮಹಾ ರುದ್ರಾಭಿಷೇಕ, ಗಣ ಹೋಮ, ಚಂಡಿಕಾ ಹೋಮ, ಕುಂಕುಮಾರ್ಚನೆ, ಪೂರ್ಣಾಹುತಿ, ನೈವೇದ್ಯ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಮಂಗಳವಾರ ವಿವಿಧ ಧಾರ್ಮಿಕ ಕೈಂಕರ್ಯದೊಂದಿಗೆ ಜಾತ್ರೆ ಸಂಪನ್ನವಾಯಿತು. ನೆರೆದಿದ್ದ ಭಕ್ತರಿಗೆ ಎರಡು ದಿನಗಳ ಕಾಲ ಅನ್ನ ಸಂತರ್ಪಣೆ ಮಾಡಲಾಯಿತು.
ಗಾಣಿಗರ ಸಂಘದ ಅಧ್ಯಕ್ಷ ಮಂಜುನಾಥ್, ಖಜಾಂಚಿ ಅನಿಲ್, ಕಾರ್ಯದರ್ಶಿ ಪುಟ್ಟರಾಜು, ಗೌರವಾಧ್ಯಕ್ಷ ನಿಂಗರಾಜು, ದೇವಸ್ಥಾನ ಕಾರ್ಯಕಾರಿ ಮಂಡಳಿ ಸದಸ್ಯರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.