

ಕಾರವಾರ: ಇಲ್ಲಿನ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರೆ ಸರಳ ರೀತಿಯಲ್ಲಿ ಗುರುವಾರ ಸಂಪನ್ನಗೊಂಡಿತು. ನೂರಾರು ಭಕ್ತಾದಿಗಳು ಅರಬ್ಬಿ ಸಮುದ್ರದ ನಡುವೆ ಇರುವ ದ್ವೀಪಕ್ಕೆ ದೋಣಿಯಲ್ಲಿ ತೆರಳಿ ಶ್ರದ್ಧೆ-ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಕಡವಾಡದ ನರಸಿಂಹ ದೇವರನ್ನು ಗುರುವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಕರೆತಂದು ನಂತರ ಅಲಂಕೃತ ದೋಣಿಯಲ್ಲಿ ಕೂರ್ಮಗಡಕ್ಕೆ ಕೊಂಡೊಯ್ಯಲಾಯಿತು. ದೇವರನ್ನು ದ್ವೀಪದಲ್ಲಿರುವ ಕಟ್ಟೆಯ ಮೇಲಿರಿಸಿ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಭಕ್ತರು ಬಾಳೆ ಹಣ್ಣಿನ ಕೊನೆ ಹರಕೆ ಒಪ್ಪಿಸಿದರು. ಕಡವಾಡದ ಭಕ್ತಾದಿಗಳು ದ್ವೀಪದಲ್ಲಿಯೇ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿದರು. ಜ. 29 ರಂದು ಬೆಳಗ್ಗೆ ದೇವರನ್ನು ದೋಣಿಯಲ್ಲಿ ವಾಪಸ್ ಕರೆತಂದು ಕಾರವಾರ ಕೋಡಿಬಾಗದಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು.
ಬಿಗಿ ಭದ್ರತೆ: 2019ರಲ್ಲಿ ಜಾತ್ರೆಯಿಂದ ಜನರನ್ನು ವಾಪಸ್ ಕರೆತರುತ್ತಿದ್ದ ದೋಣಿ ಮುಳುಗಿ ಅವಘಡ ಸಂಭವಿಸಿತ್ತು. ಇದರಿಂದ ಈ ಬಾರಿ ಭಾರಿ ಭದ್ರತೆ ಆಯೋಜಿಸಲಾಗಿತ್ತು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅನುಮತಿ ಪಡೆದ ಬೋಟ್ಗಳಲ್ಲಿ ಮಾತ್ರ ಜನರನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಎಲ್ಲರಿಗೂ ಲೈಫ್ ಜಾಕೆಟ್ ವ್ಯವಸ್ಥೆ ಮಾಡಲಾಗಿತ್ತು. ಎಎಸ್ಪಿ ಬದರೀನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸ್ವತಃ ತೆರಳಿ ಭದ್ರತೆಯ ಮೇಲುಸ್ತುವಾರಿ ವಹಿಸಿದರು.
ಶಾಸಕಿ ರೂಪಾಲಿ ಭೇಟಿ: ಶಾಸಕಿ ರೂಪಾಲಿ ನಾಯ್ಕ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ಕೂರ್ಮಗಡ ಜಾತ್ರೆಗೆ ಆಗಮಿಸುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲು ದ್ವೀಪದ ಮಾಲೀಕರ ಜತೆ ಮಾತನಾಡಲಾಗಿದೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು. 3 ಗಂಟೆಯವರೆಗೂ ದ್ವೀಪದಲ್ಲೇ ಇದ್ದು ಭಕ್ತಾದಿಗಳ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದರು.