

ಶಿರಸಿ: ತಾಲೂಕಿನ ಬನವಾಸಿ ಗ್ರಾಮದೇವತೆ ಶ್ರೀ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಸಂಜೆಯಿಂದ ಆರಂಭವಾಯಿತು.
ರಾತ್ರಿ ದೇವಿಯ ತವರು ಮನೆಯವರಾದ ಟಿ.ಜಿ. ನಾಡಿಗೇರ ಕುಟುಂಬಸ್ಥರು ಶ್ರೀ ಮಾರಿಕಾಂಬಾ ದೇವಿಗೆ ಉಡಿ ತುಂಬಿ ಮೊದಲ ದಿನದ ಧಾರ್ವಿುಕ ವಿಧಿವಿಧಾನಗಳು ನಡೆದವು. ಬುಧವಾರ ಮುಂಜಾನೆವರೆಗೆ ಬನವಾಸಿ, ಕಡಗೋಡ, ಕಪ್ಪಗೇರಿ, ಯಡೂರಬೈಲ್ ಗ್ರಾಮ ಸಾವಿರಾರು ಭಕ್ತರು ಆಗಮಿಸಿ ಉಡಿ ತುಂಬಿ, ಹಣ್ಣುಕಾಯಿ ಸಮರ್ಪಿಸಿದರು.
ಬುಧವಾರ ಮುಂಜಾನೆ ಹೂವಿನ ಕೊಪ್ಪಲಕೇರಿಯಲ್ಲಿರುವ ಶ್ರೀ ಹಕ್ಕಲ ಮಾರಿಕಾಂಬಾ ದೇವಸ್ಥಾನದಿಂದ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ತಂದು ಪಟ್ಟಣದಲ್ಲಿರುವ ಬಿಡ್ಕಿ ಬಯಲಿನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಾನ ನಡೆಸಲಾಯಿತು.
ಶ್ರೀ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಕ್ಕಲ ಮಾರಿಕಾಂಬಾ ದೇವಸ್ಥಾನದಿಂದ ಬಿಡ್ಕಿ ಬಯಲಿನವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ವಿವಿಧ ವಾದ್ಯ ಮೇಳಗಳು, ಡೊಳ್ಳು ಕುಣಿತ, ತಮಟೆ ವಾದ್ಯ, ನಾಸಿಕ್ ಡೊಳ್ಳು ಹಾಗೂ ಬಂಟ್ವಾಳದ ಚಿಲಿಪಿಲಿ ಗೊಂಬೆಗಳು ಮೆರವಣಿಗೆಗೆ ಮೆರಗು ನೀಡಿದವು. ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಮಹಿಳೆಯರು ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಶ್ರೀ ಹಕ್ಕಲ ಮಾರಿಕಾಂಬಾ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮದಾಸ ಚೌಧರಿ, ಸರ್ವ ಸದಸ್ಯರು, ಜಾತ್ರಾ ಕಮಿಟಿಯ ಅಧ್ಯಕ್ಷ ವಸಂತ ಇಳಿಗೇರ, ರವೀಂದ್ರ ಕೆ.,ಶಿವಾಜಿ ಬನವಾಸಿ ಸರ್ವ ಸದಸ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡರು.