ಮರೆಯಾಗುತ್ತಿರುವ ರಂಗಭೂಮಿಯ ಮೂಲ ಆಶಯ: ಮಲ್ಲಿಕಾರ್ಜುನ ಕಡಕೊಳ ಬೇಸರ

2
Published on

ಮೈಸೂರು: ಕಿರುತೆರೆ, ಕೆಲ ನಾಟಕ ಕಂಪನಿಗಳು ರಂಗಭೂಮಿಯ ಮೂಲ ಆಶಯಗಳನ್ನು ಮರೆಗೆ ಸರಿಸುತ್ತಿವೆ ಎಂದು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೊಳ ಬೇಸರ ವ್ಯಕ್ತಪಡಿಸಿದರು.

ವೃತ್ತಿರಂಗಭೂಮಿ ರಂಗಾಯಣ ದಾವಣಗೆರೆಯಿಂದ ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಲಕ್ಷ್ಮೀಪುರಂನ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ 15 ದಿನಗಳ ರಂಗ ಸಂಗೀತ ಮತ್ತು ಅಭಿನಯ ರಂಗಗೀತೆಗಳ ಕಲಿಕಾ ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ರಂಗಭೂಮಿಗೆ 150ಕ್ಕೂ ಹೆಚ್ಚು ವರ್ಷಗಳ ರಂಗ ಸಂಸ್ಕೃತಿಯ ಇತಿಹಾಸವಿದೆ. ಈ ಇತಿಹಾಸದ ಉದ್ದಕ್ಕೂ ವೃತ್ತಿ ರಂಗಭೂಮಿ ತನ್ನ ಪರಂಪರೆ ಕಾಪಾಡಿಕೊಂಡು ಬಂದಿರುವ ಐತಿಹ್ಯ ಕೂಡ ಇದೆ. ಈ ಮೂಲಕ ಕನ್ನಡ ರಂಗಭೂಮಿ ತನ್ನ ವಿವಿಧ ಸ್ಥಿತ್ಯಂತರಗಳನ್ನು ಕಂಡಿದೆ ಎಂದರು.

ಆದರೆ ಇತ್ತೀಚಿನ ದಿನಗಳಲ್ಲಿ ಕಿರುತರೆ ಸೇರಿದಂತೆ ವರ್ತಮಾನದ ಕೆಲವು ಕಂಪನಿ ನಾಟಕಗಳು ತಮ್ಮ ಚಹರೆ ಪಟ್ಟಿ ಉಳಿಸಿಕೊಳ್ಳಲು ಮೂಲ ಆಶಯಗಳನ್ನು ಮರೆಗೆ ಸರಿಸುತ್ತಿವೆ. ಹಾಗಾಗಿ ರಂಗಭೂಮಿಯ ಮೂಲ ಆಶಯವನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ವೃತ್ತಿ ರಂಗಭೂಮಿಯಲ್ಲಿ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ ಮತ್ತು ರಂಗ ಸಜ್ಜಿಕೆ ಎಂಬ ಮೂರು ಮುಖ್ಯ ಪರಂಪರೆಗಳಿವೆ. ಈ ಮೂರು ಮುಖ್ಯ ಪರಂಪರೆಗಳನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದೆ. ಹೀಗಾಗಿ ಸೃಜನಶೀಲವಾಗಿರುವಂತಹ ವೃತ್ತಿ ರಂಗಭೂಮಿ ಪರಂಪರೆಯನ್ನು ಮತ್ತೆ ಪುನಶ್ಚೇತನಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕಂದ ಪದ್ಯಗಳು, ಸೀಸ ಪದ್ಯಗಳು ಇಂದಿನ ನಾಟಕಗಳಲ್ಲಿ ಕಂಡುಬರುತ್ತಿಲ್ಲ. ಆದರೆ ನಾಟಕಗಳಿಗೆ ಇದರ ಅಗತ್ಯವಿದೆ. ಇಂದಿಗೂ ವಿವಿಧ ರಾಜ್ಯಗಳಲ್ಲಿ ಸಮಗ್ರ ರಂಗಭೂಮಿಯ ಕಲ್ಪನೆಯಿಂದಾಗಿ ವೃತ್ತಿ ರಂಗಭೂಮಿ ಅಥವಾ ನಾಟಕ ಸಂಗೀತ ಇಂದಿಗೂ ಇದೆ ಎಂದರು.

ಹಿಂದೆ ಸ್ವರ ಶುದ್ಧಿಯಾಗಿದ್ದರೆ ಮಾತ್ರ ನಾಟಕಗಳಿಗೆ ಕರೆದುಕೊಳ್ಳುತ್ತಿದ್ದರು. ಹೀಗೆಯೇ ಒಂದು ರಂಗಭೂಮಿಯ ನಾಟಕಕ್ಕೆ ಹೋಗಬೇಕಾದರೆ ಅವರ ಸ್ವರ ಜ್ಞಾನ ಬಹಳ ಮುಖ್ಯವಾಗಿರಬೇಕು ಎಂದು ತಿಳಿಸಿದರು.

ಅಧ್ಯಯನದ ಪ್ರಕಾರ ಮೈಸೂರು ಜಿಲ್ಲೆ ಅಥವಾ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳು ಇಂದಿಗೂ ಪ್ರಚಲಿತದಲ್ಲಿವೆ. ತುಮಕೂರು ಜಿಲ್ಲೆಯಲ್ಲೇ 120 ನಾಟಕ ತಂಡಗಳಿವೆ. ಆ ನಾಟಕ ತಂಡಗಳು ಹಳ್ಳಿಯಲ್ಲಿ ವರ್ಷಕ್ಕೆ 1 ರಿಂದ 2 ನಾಟಕ ಮಾಡುತ್ತದೆ. ಕರ್ನಾಟಕದಲ್ಲಿ ವರ್ಷಕ್ಕೆ 15 ರಿಂದ 18 ಸಾವಿರ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದು ಮಾಹಿತಿ ನೀಡಿದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸಂಸ್ಥಾನದಲ್ಲಿ ವೃತ್ತಿರಂಗ ತಂಡಗಳನ್ನು ಕಟ್ಟುವುದಕ್ಕೆ ಸಹಕಾರ ಕೊಟ್ಟಿದ್ದರು. ನಾಲ್ವಡಿ ಅವರು ಸ್ವತಃ ನಾಟಕಗಳ ರಚನೆಯನ್ನು ಮಾಡಿದ್ದರು. ನೃತ್ಯ, ನಾಟಕ, ಸಂಗೀತ ಕಲೆಗಳಿಗೆ ಮೈಸೂರು ಸಂಸ್ಥಾನದ ರಾಜರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ವಿಶ್ವಕ್ಕೆ ಭಾರತೀಯ ರಂಗಭೂಮಿ ಮಾದರಿಯಾದರೆ ಭಾರತದ ರಂಗಭೂಮಿಗೆ ಕರ್ನಾಟಕ ರಂಗಭೂಮಿ ಮಾದರಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಗ್ಲೋಬಲ್ ಥಿಯೇಟರ್‌ನಲ್ಲಿ ನಾಟಕವೊಂದನ್ನು ನೋಡಿದರು. ನಂತರ ಸಾಂಸ್ಕೃತಿಕ ವಿದ್ಯಾಭ್ಯಾಸದ ನಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ತಮ್ಮ ಸಂಸ್ಥಾನದಲ್ಲಿ ರಂಗಭೂಮಿಗೆ ಹೆಚ್ಚಿನ ಆದ್ಯತೆ ನೀಡಿದರು ಎಂದು ಬಣ್ಣಿಸಿದರು.

ರಂಗ ಸಮಾಜದ ಸದಸ್ಯ ಎಚ್.ಎಸ್.ಸುರೇಶಬಾಬು, ಶಿಬಿರದ ನಿರ್ದೇಶಕರಾದ ಹಿರಿಯ ಪೌರಾಣಿಕ ರಂಗಕರ್ಮಿ ವೈ.ಎಂ.ಪುಟ್ಟಣ್ಣಯ್ಯ, ಶಿಬಿರದ ಸಂಚಾಲಕ ಸುಪ್ರೀತ್ ಎಸ.ಭಾರದ್ವಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net