

ಹುಬ್ಬಳ್ಳಿ: ಮಾನವನಿಗೆ ಇಂದ್ರಿಯಗಳಲ್ಲಿ ಪ್ರಧಾನವಾದದು ಕಣ್ಣು. ಜಗತ್ತೇ ನೋಡುವ ಕಣ್ಣುಗಳನ್ನು ತಾತ್ಸಾರ ಮಾಡದೇ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಧಾರವಾಡ ಮುರುಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜಯಪ್ರಿಯಾ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಐ ಕೇರ್ ಸೆಂಟರ್ ವತಿಯಿಂದ ಶನಿವಾರ ಏರ್ಪಡಿಸಿದ್ದ ನೇತ್ರೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವಯವಗಳಲ್ಲಿ ಶಿರವೇ ಮುಖ್ಯವಾದದು. ದೇಹವೇ ದೇಗುಲವಾದರೂ ಕಣ್ಣು ನಮ್ಮ ಚಲನವಲನಕ್ಕೆ ಸಾಕ್ಷಿಯಾಗಿದೆ. ಇಂಥ ಕಣ್ಣುಗಳನ್ನು ವೈದ್ಯರಿಂದ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.
ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಕಣ್ಣು ಸೂಕ್ಷ್ಮ ಅಂಗ. ವಚನಗಳಲ್ಲಿ ಕಣ್ಣಿಗೆ ಮಹಾಲಿಂಗ ಸ್ಥಾನ ನೀಡಲಾಗಿದೆ. ಅಲ್ಲಮಪ್ರಭುವಿನ ವಚನದಲ್ಲಿ ಕಣ್ಣಿನ ಮಹತ್ವದ ಬಗ್ಗೆ ಗುಣಗಾನ ಮಾಡಲಾಗಿದೆ ಎಂದರು.
ಕಣ್ಣಿನ ಆರೈಕೆ ಮಾಡಿಕೊಳ್ಳಬೇಕು. ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ಕಣ್ಣುಗಳು ಸಂಕಷ್ಟಕ್ಕೀಡಾಗಿವೆ. ದೇವರು ಕೊಟ್ಟ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಕಣ್ಣಿನ ಅನಾರೋಗ್ಯಕ್ಕೆ ಕಾರಣವಾದ ಅಂಶಗಳನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.
ಸೆಂಟರ್ ಮುಖ್ಯಸ್ಥ ಡಾ. ವೆಂಕಟರಾಮ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಆರಂಭದಲ್ಲಿಯೇ ಈ ಭಾಗದಲ್ಲಿ ಶಿಬಿರಗಳನ್ನು ಏರ್ಪಡಿಸಿದ್ದೆ. ಆಗ ಕಣ್ಣುಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ನಿರ್ಲಕ್ಷೃ ಮಾಡುತ್ತಿರುವುದು ಕಂಡುಬಂತು. ಹಾಗಾಗಿ ಜಾಗೃತಿ ಮತ್ತು ತಪಾಸಣೆ ಶಿಬಿರಗಳನ್ನು ಹೆಚ್ಚೆಚ್ಚು ಮಾಡಲಾರಂಭಿಸಿದೆವು ಎಂದರು.
ಜಯಪ್ರಿಯಾ ಆಸ್ಪತ್ರೆ ಸಂಸ್ಥಾಪಕ ಡಾ. ಶ್ರೀಕೃಷ್ಣ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಯೋಧ ರವಿಚಂದ್ರ ಬಾಲೆಹೊಸೂರ, ಪ್ಯಾರಾ ಶೂಟಿಂಗ್ ಸಾಧಕ ಶಂಕರಲಿಂಗ ತವಳಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶೇಖಪ್ಪ ಕೇಸರಿ, ಸುರೇಶ ಮುಗಳಿ, ಸಮಾಜ ಸೇವಕ ಪ್ರಕಾಶ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ನರಗುಂದ ಸುಕ್ಷೇತ್ರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು, ಎ.ಸಿ. ಹಿರೇಮಠ, ಡಾ. ಅನುಜಾ ದೇಸಾಯಿ, ಡಾ. ಪ್ರಿಯಾ ಕಟ್ಟಿ, ಡಾ. ಲಕ್ಷ್ಮೀ ಗುಮಾಸ್ತೆ, ಡಾ. ದೀಪಾ ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.