ಸರ್ಕಾರದಿಂದ ಜನಪರ ಕಾನೂನು ನಿರ್ನಾಮ : ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆರೋಪ

102707387_3042729782501754_7637910088779243560_o
Published on

ತುಮಕೂರು: ಕೇಂದ್ರ, ರಾಜ್ಯ ಸರ್ಕಾರಗಳು ಜನಸಾಮಾನ್ಯರು ಮತ್ತು ಶ್ರಮ ಜೀವಿಗಳನ್ನು ಸಂಶಯದಿಂದ ನೋಡುವ ಹಾಗೂ ಜನರ ಚಲನವಲನ ನಿಯಂತ್ರಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿವೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆರೋಪಿಸಿದರು.

ನಗರದ ಜನಚಳವಳಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಿಐಟಿಯು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜನರನ್ನು ಅನುಮಾನದಿಂದ ನೋಡುವ ಸರ್ಕಾರ ಜನರಿಗೆ ಏನು ಮಾಡುತ್ತಿದೆ ಎಂಬುದನ್ನು ಪಾರದರ್ಶಕವಾಗಿ ಹೇಳುತ್ತಿಲ್ಲ. ಜನಪರವಾಗಿದ್ದ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳು, ಅಗತ್ಯವಸ್ತುಗಳ ನಿಯಂತ್ರಣ ಕಾಯ್ದೆ, ಭೂಒಡೆತನ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಕಾನೂನುಗಳನ್ನು ನಿರ್ನಾಮ ಮಾಡುತ್ತಿವೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲಾ ಮಾತನಾಡಿ, ಸ್ಕೀಂ ನೌಕರರು, ಕರೊನಾ ವಾರಿಯರ್ ಕೆಲಸ ನಿರ್ವಹಿಸಿದರೂ ಸರ್ಕಾರ ಮಾನ್ಯತೆ ನೀಡಿಲ್ಲ. ಬಿಸಿಯೂಟ ಕೆಲಸಗಾರರಿಗೆ ಯಾವುದೇ ಸಂಭಾವನೆ ಇಲ್ಲದೆ ಬದುಕು ಸಂಕಟಮಯವಾಗಿದೆ ಎಂದರು. ಗ್ರಾಮ ಪಂಚಾಯಿತಿಗಳಲ್ಲಿ ಹಲವು ತಿಂಗಳಿಂದ ಸಂಬಳ ನೀಡದೆ ನೌಕರರು ಸಂಕಷ್ಟಕ್ಕೆ ಈಡಾಗಿದ್ದಾರೆಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಆಪಾದಿಸಿದರು. ಬೀಡಿ ಕಾರ್ಮಿಕರ ಸಂಘದ ನಿಸಾರ್ ಅಹಮತ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಇಂಜಿನಿಯರಿಂಗ್ ಕಾಲೇಜುಗಳ ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಡಿ. ನಾಗೇಶ್, ಮುನಾಫ್ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಗುತ್ತಿಗೆ, ತಾತ್ಕಾಲಿಕ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಉದ್ದಮಿಗಳ ಸಂಕಷ್ಟ ಆಲಿಸುವ ಉಸ್ತುವಾರಿ ಸಚಿವರು, ಸರ್ಕಾರ ಹತ್ತಾರು ಮನವಿಗಳ ನಂತರವೂ ದುಡಿಯುವವರ ಕುರಿತು ಸಭೆ ನಡೆಸಿಲ್ಲ. ಸೈಯದ್ ಮುಜೀಬ್ ಸಿಐಟಿಯು ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net