

ನೆಲಮಂಗಲ : ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವುದಲ್ಲದೆ, ಸೃಜನಶೀಲತೆಗೆ ಕನ್ನಡಿಯಾಗಿವೆ ಎಂದು ಶಿಕ್ಷಣ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಬೈಲಾಂಜಿನಪ್ಪ ತಿಳಿಸಿದರು.
ನಗರಸಭೆ ವ್ಯಾಪ್ತಿಯ ವಾಜರಹಳ್ಳಿ ಥಾಮಸ್ ಮೆಮೋರಿಯಲ್ ಆಂಗ್ಲ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು. ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ಪಠ್ಯದ ವಿಷಯಗಳು ಎಷ್ಟು ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ. ಪ್ರದರ್ಶನಗಳು ಸುಲಭ ವಿಷಯ ಗ್ರಹಿಕೆಗೆ ಸಹಕಾರಿಯಾಗುತ್ತದೆ. ಇದು ಶಿಕ್ಷಣದ ಒಂದು ಭಾಗವಾಗಿ ರೂಪುಗೊಂಡಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ರವಿ ಮಾತನಾಡಿ, ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ ಎಂದರು. ಥಾಮಸ್ ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಜೋಸ್ನಾ ್ರಾನ್ಸಿಸ್ ಆಂಟೋನಿ, ಶಿಕ್ಷಕರಾದ ಹರ್ಷವರ್ಧನ್, ಪ್ರಜ್ವಲ್, ಶ್ರೀದೇವಿ, ಪ್ರಭಾವತಿ, ಮೋಹನ್, ಹರ್ಷಿತ್ ಇತರರು ಇದ್ದರು.
ವಿಜ್ಞಾನ ಪ್ರದರ್ಶನ: ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ ,
ಆಹಾರ ಪದ್ಧತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಗಮನ ಸೆಳೆದವು.