

ಬಬಲೇಶ್ವರ : ತಾಲೂಕಿನ ಕಾರಜೋಳದಲ್ಲಿ ಕಾರ ಹುಣ್ಣಿಮೆಯಾದ ಏಳು ದಿನಕ್ಕೆ ಹಮ್ಮಿಕೊಳ್ಳುವ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ಮಂಗಳವಾರ ಸಂಜೆ ಅಪಾರ ಜನ ಸ್ತೋಮದ ಮಧ್ಯೆ ಸಂಭ್ರಮದಿಂದ ನಡೆಯಿತು.
ಎತ್ತುಗಳನ್ನು ಶೃಂಗರಿಸಿ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಊರ ಅಗಸಿ ಬಳಿ ಕರಿ ಹರಿಯಲು ಬಿಡಲಾಯಿತು. ಯುವಕರು ಎತ್ತುಗಳನ್ನು ರೇಗಿಸಲು ಅವುಗಳ ಮುಂದೆ ಕೆಂಪು ಬಟ್ಟೆಗಳನ್ನು ಪ್ರದರ್ಶಿಸಿದಾಗ ಆಕ್ರೋಶಗೊಂಡ ಎತ್ತುಗಳು ಸಿಕ್ಕ ಸಿಕ್ಕವರನ್ನು ತಿವಿಯಲು ಧಾವಿಸುತ್ತಿದ್ದ ದೃಶ್ಯ ನೋಡುಗರ ಮೈಮನ ರೋಮಾಂಚನಗೊಳಿಸಿತು. ಎತ್ತುಗಳ ನಿಯಂತ್ರಣಕ್ಕೆ ಕಟ್ಟಲಾಗಿದ್ದ ಹಗ್ಗವನ್ನು 20ಕ್ಕೂ ಯುವಕರು ನಿಯಂತ್ರಿಸುತ್ತಿದ್ದರೂ ಆಕ್ರೋಶದಿಂದ ಎತ್ತುಗಳು ಯುವಕರತ್ತ ತೆರಳುತ್ತಿದ್ದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಸುತ್ತಲಿನ ಗ್ರಾಮಸ್ಥರು ಕೇಕೆ ಹಾಕಿ ಸಂಭ್ರಮಿಸಿದರು.
ಎತ್ತಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆಯೂ ನಡೆಯಿತು. ಅಂತಿಮವಾಗಿ ಬಿಳಿ ಬಣ್ಣದ ಎತ್ತು ಕರಿ ಹರಿಯುವಲ್ಲಿ ಯಶಸ್ವಿಯಾಯಿತು. ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಕಾರ ಹುಣ್ಣಿಮೆಗೆ ಮತ್ತಿಷ್ಟು ಮೆರಗು ಬಂದಿತ್ತು.