

ಬಾಗಲಕೋಟೆ: ಅಂದುಕೊಂಡಂತೆ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆದಿದ್ದರೆ ಜ.24ರಂದು ಫಲಿತಾಂಶ ಸಹ ಹೊರಬಂದು ಮುಂದಿನ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ವಿಳಂಬ ನೀತಿ ಪರಿಣಾಮ ಜನವರಿ ಅಂತ್ಯ ಬಂದರೂ ಪರೀಕ್ಷೆಯೇ ನಡೆದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಂದು, ನಾಳೆ ಎಂದು ಕಾಯುವ ಶಿಕ್ಷೆ ನೀಡಿದೆ ಬಾಗಲಕೋಟೆ ವಿಶ್ವವಿದ್ಯಾಲಯ.
ಜಿಲ್ಲೆಯ ಜಮಖಂಡಿಯಲ್ಲಿ ಇರುವ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕ ಪದವಿಯ 1ನೇ ಸೆಮಿಸ್ಟರ್ ಹಾಗೂ 3ನೇ ಸೆಮಿಸ್ಟರ್ ಪರೀಕ್ಷೆಗಳು ಒಂದು ತಿಂಗಳಿಗೂ ಅಧಿಕ ಸಮಯ ವಿಳಂಬವಾಗಿದೆ.
ಈಗಾಗಲೇ 1 ಮತ್ತು 3ನೇ ಸೆಮಿಸ್ಟರ್‌ಗಳಿಗೆ ಪಠ್ಯಬೋಧನೆ ಮುಗಿದ ತಿಂಗಳು ಗತಿಸಿದೆ. ಆದರೆ, ಪರೀಕ್ಷೆ ನಿಗದಿತ ಸಮಯಕ್ಕೆ ನಡೆಯದೇ 70ಕ್ಕೂ ಹೆಚ್ಚು ಕಾಲೇಜುಗಳ ಅಂದಾಜು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮುಂದಿನ ಸೆಮಿಸ್ಟರ್ ಆರಂಭವಾಗಿ ಆ ಪಠ್ಯ ಅಧ್ಯಯನ ಮಾಡಬೇಕಿದ್ದ ವಿದ್ಯಾರ್ಥಿಗಳು ಈಗ ಮನೆ, ಹಾಸ್ಟೆಲ್‌ಗಳಲ್ಲಿದ್ದುಕೊಂಡು 1 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಾಗಿ ಅಧ್ಯಯನ ಮಾಡುವಂತಾಗಿದೆ.
ಬಾಗಲಕೋಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ವೇಳಾಪಟ್ಟಿಯಂತೆ ಪದವಿಯ ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎ, ಬಿಸಿಎ, ಬಿಎಸ್‌ಡಬ್ಲುೃ 1ನೇ ಸೆಮಿಸ್ಟರ್ ಡಿಸೆಂಬರ್ 12ಕ್ಕೆ ಹಾಗೂ ಪದವಿಯ 3ನೇ ಸೆಮಿಸ್ಟರ್ ಡಿಸೆಂಬರ್ 24ಕ್ಕೆ ಪಠ್ಯ ಬೋಧನೆಯ ಅವಧಿ ಮುಕ್ತಾಯಗೊಂಡಿದೆ. ಮೊದಲ ಸೆಮಿಸ್ಟರ್‌ಗೆ ಜನವರಿ 26ರ ಒಳಗಾಗಿ ಪ್ರಾಯೋಗಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟನೆ ಮಾಡಿ, ಇದೇ ತಿಂಗಳು ಅಂತ್ಯಕ್ಕೆ 2ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಬೇಕಿತ್ತು.
ಹಾಗೆಯೇ 3ನೇ ಸೆಮಿಸ್ಟರ್ ಗೆ 2024ರ ಡಿಸೆಂಬರ್ 25 ರಿಂದ 2024ರ ಜನವರಿ 1ರ ಒಳಗಾಗಿ ಪ್ರಾಯೋಗಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸಬೇಕಿತ್ತು. ಆದರೆ, ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮಾತ್ರ ಇನ್ನೂ ಪರೀಕ್ಷೆಯೇ ನಡೆದಿಲ್ಲ. ಇದೀಗ ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಮುಖ್ಯವಾಗಿ ಪರೀಕ್ಷೆಯ ವಿಳಂಬಕ್ಕೆ ಉತ್ತರ ಪತ್ರಿಕೆಗಳ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮುಂಚಿತವಾಗಿಯೇ ಪರೀಕ್ಷಾ ಶುಲ್ಕ ಕಟ್ಟಿರುತ್ತಾರೆ. ಪರೀಕ್ಷಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಿಗದಿತ ಸಮಯದಲ್ಲಿ ಉತ್ತರ ಪತ್ರಿಕೆಗಳನ್ನು ಪೂರೈಸಲು ಯಾವ ಅಡೆತಡೆ ಆಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಪರೀಕ್ಷೆ ಯಾಕೆ ನಡೆಯುತ್ತಿಲ್ಲ ಎಂದು ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಿ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಅದೇ ಬೇರೆ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಪರೀಕ್ಷೆ ಮುಗಿದು ಮುಂದಿನ ಸೆಮಿಸ್ಟರ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಮಾತ್ರ ಇನ್ನೂ ಪರೀಕ್ಷೆಯೇ ನಡೆದಿಲ್ಲ. ಈ ವಿಳಂಬ ಮುಂದಿನ ಸೆಮಿಸ್ಟರ್‌ಗಳ ಆರಂಭ, ಪಠ್ಯ ಬೋಧನೆ, ಪರೀಕ್ಷೆ ಸಮಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪರೀಕ್ಷೆ ನಡೆಸಿ ಎನ್ನುವ ನಿರಂತರ ಒತ್ತಡ ಇದ್ದಿದ್ದರಿಂದ ಜ.24ರಂದು ವಿಶ್ವವಿದ್ಯಾಲಯವೂ ತುರ್ತು ಪರೀಕ್ಷಾ ವೇಳೆ ಪಟ್ಟಿಯನ್ನು ಪ್ರಕಟಿಸಿದೆ. ಫೆ.7ರಿಂದ ಇಡೀ ತಿಂಗಳು ಪರೀಕ್ಷೆ ನಡೆಯಲಿವೆ. ಈಗಲಾದರೂ ಪ್ರಕಟಿಸಿದ ದಿನಾಂಕಕ್ಕೆ ಪರೀಕ್ಷೆ ನಡೆಸಿದರೂ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ಮಾರ್ಚ್‌ನಲ್ಲಿ ಆರಂಭವಾಗುತ್ತದೆ.