

ಸವಣೂರ: ಸನಾತನ ಧರ್ಮದ ತಳಹದಿಯಿಂದ ರೂಪಗೊಂಡಿರುವ ಹಬ್ಬ-ಹರಿದಿನಗಳು ಮನುಷ್ಯನ ಆದರ್ಶ ಬದುಕಿನ ರೀತಿ, ಸಂಸ್ಕಾರಯುತ ಜೀವನ ಶೈಲಿ ಮತ್ತು ಉತ್ತಮ ಮೌಲ್ಯಗಳ ಪ್ರತಿರೂಪವಾಗಿವೆ ಎಂದು ತಿಪ್ಪಾಯಿಕೊಪ್ಪ ಜಂಗಮ ಕ್ಷೇತ್ರದ ಮೂಕಪ್ಪ ಶಿವಯೋಗಿಗಳವರ ಶ್ರೀಮಠದ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಗಣೇಶ ನಗರದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ 37ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಆಚರಣೆಗಳು ಸಭ್ಯತೆ, ಸದ್ಗುಣ, ಪ್ರಾಮಾಣಿಕತೆ, ತಾಳ್ಮೆ, ಒಳ್ಳೆಯತನ, ಉದಾರತೆ, ಆದರ್ಶಗಳನ್ನು ಪ್ರತಿಪಾದಿಸುತ್ತವೆ. ಗಣೇಶೋತ್ಸವ ಆಚರಣೆಯಲ್ಲಿ ಈ ಭವ್ಯ ಸಂದೇಶಗಳನ್ನು ಕಾಣಬಹುದಾಗಿದೆ ಎಂದರು.
ಹಾವೇರಿ ಲೋಕಸಭೆ ಸದಸ್ಯರ ಆಪ್ತ ಕಾರ್ಯದರ್ಶಿ ರಾಜು ಪೇಟಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಕಾರಯುತ ಜೀವನ ಮಾತ್ರ ಮಾನವನ ಬದುಕನ್ನು ಹಸನಗೊಳಿಸುತ್ತದೆ. ಹಿರಿಯರ ಬಗೆಗಿನ ಗೌರವ ಭಾವನೆ ಕೌಟುಂಬಿಕ ಸಾಮರಸ್ಯವನ್ನು ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಮನೆಮನಗಳಲ್ಲಿ ಸದ್ಗುಣ ಮತ್ತು ಒಳ್ಳೆಯತನವನ್ನು ರೂಢಿಸಿಕೊಂಡಾಗ ಮನೆಗಳು ನಂದನವನವಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಮತ್ತು ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು. ರುದ್ರಪ್ಪ ಹಲಸೂರ, ನಿವೃತ್ತ ಶಿಕ್ಷಕ ಬಿ.ಎಲ್.ಪೂಜಾರ, ಕರಿಯಪ್ಪ ನಾಯ್ಕನವರ, ವಿರೂಪಾಕ್ಷಯ್ಯ ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಅಶೋಕಗೌಡ ಪಾಟೀಲ, ಚನ್ನಪ್ಪ ದೇಸಾಯಿ, ಮಹಾದೇವಪ್ಪ ಪೇಟಕರ ಇತರರು ಪಾಲ್ಗೊಂಡಿದ್ದರು. ಗದಿಗೆಪ್ಪ ಹಲಸೂರ, ಮಂಜಪ್ಪ ದೇಸಾಯಿ, ಗದಿಗಯ್ಯ ನಡುವಿನಮಠ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು. ರಾಜಶೇಖರ ಹಲಸೂರ, ಉಳವಪ್ಪ ಬಸವಣ್ಣೆಪ್ಪ ಹಲಸೂರ ಕಾರ್ಯಕ್ರಮ ನಿರ್ವಹಿಸಿದರು.