

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧೆಡೆ ಗುರುವಾರ ಸುಮಾರು ಒಂದು ಗಂಟೆಗಳ ಕಾಲ ಜೋರು ಮಳೆಯಾಯಿತು. ಇದರಿಂದ ರೈತ ವರ್ಗದಲ್ಲಿ ಸಂತಸ ಮನೆ ಮಾಡಿದರೆ, ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸಿದರು. ಆಂಡಿಪಾಳ್ಯ ಸಮೀಪದ ಜಡೇತಡಿ ಹಳ್ಳದ ಸೇತುವೆ ಮೇಲೆ ನೀರು ಹರಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ತಾಲೂಕಿನಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತವರಣವಿತ್ತು. ಹಾಗಾಗಿ ಮ.ಬೆಟ್ಟದಲ್ಲಿ ಮಧ್ಯಾಹ್ನ 2.30ರಲ್ಲಿ ಆರಂಭವಾದ ಜೋರು ಮಳೆ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು. ಇದರಿಂದ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಪೂಜಾ ಪುನಸ್ಕಾರದಲ್ಲಿ ತೊಡಗಲು ಅಡ್ಡಿಪಡಿಸಿತು. ದೇಗುಲದ ಮುಂಭಾಗದ ರಂಗಮಂದಿರದಲ್ಲಿ ಭಕ್ತರು ಮಳೆಯಿಂದ ಆಶ್ರಯ ಪಡೆದರು.
ಇನ್ನು ತಾಲೂಕಿನ ಲೊಕ್ಕನಹಳ್ಳಿ, ಚಿಕ್ಕಮಾಲಾಪುರ, ಕಣ್ಣೂರು, ಕಂಡಯ್ಯನಪಾಳ್ಯ, ಆನಾಪುರ, ಮಂಗಲ, ಗುಂಡಾಪುರ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಸಂಜೆ 5 ರಲ್ಲಿ ಆರಂಭವಾದ ಜೋರು ಮಳೆ ಒಂದು ಗಂಟೆಗಳ ಕಾಲ ಎಡಬಿಡದೇ ಸುರಿಯಿತು. ಹನೂರಿನಲ್ಲಿ ಅರ್ಧ ಗಂಟೆಗಳ ಕಾಲ ಜೋರು ಮಳೆ ಸುರಿದರೆ ರಾಮಾಪುರ ಭಾಗದಲ್ಲಿ ತುಂತುರು ಮಳೆಯಾಯಿತು. ಇದರಿಂದ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ, ಹಳ್ಳಕೊಳ್ಳಗಳ ಹಾಗೂ ಚೆಕ್ ಡ್ಯಾಂಗಳಲ್ಲಿ ನೀರು ಹರಿಯಿತು. ಇದರಿಂದ ರೈತಾಪಿ ವರ್ಗದಲ್ಲಿ ಸಂತಸ ವ್ಯಕ್ತವಾಯಿತು. ಜೋರು ಮಳೆಯಾದ್ದರಿಂದ ಕೆಲವೆಡೆ ಮುಖ್ಯ ರಸ್ತೆಗಳಲ್ಲಿ ಯಥೇಚ್ಛವಾದ ನೀರು ಹರಿಯಿತು. ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವಂತಾಯಿತು. ಇದರಿಂದ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸಬೇಕಾಯಿತು.
ಸಂಚಾರ ಸ್ಥಗಿತ: ತಾಲೂಕು ಕೇಂದ್ರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಒಡೆಯರಪಾಳ್ಯ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಸಂಜೆ ಸುಮಾರು 2 ಗಂಟೆಗಳ ಕಾಲ ಜೋರು ಮಳೆಯಾಯಿತು. ಪರಿಣಾಮ ಕೆಲವು ಜಮೀನುಗಳಿಗೆ ನುಗ್ಗಿದರೆ, ಆಂಡಿಪಾಳ್ಯ ಸಮೀಪದ ಜಡೇತಡಿ ಹಳ್ಳದ ಸೇತುವೆಯ ಯತೇಚ್ಛವಾದ ನೀರು ಹರಿಯಿತು. ಹಾಗಾಗಿ ಸುಮಾರು 5 ಗಂಟೆಗಳ ಕಾಲ ವಾಹನ ಹಾಗೂ ಜನರ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಗೋಡೆ ಕುಸಿತ: ಜೋರು ಮಳೆಯಾದ್ದರಿಂದ ಹನೂರು ಪಟ್ಟಣದಲ್ಲಿ ಕುಮಾರ್ ಅವರ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.