

ಹನೂರು: ಪ್ರಾಣಿ ಸಂಕುಲಕ್ಕೆ ಪರಿಸರವೇ ಜೀವನಾಧಾರ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ರವಿಕುಮಾರ್ ಹೇಳಿದರು.
ತಾಲೂಕಿನ ಕಣ್ಣೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮದ ಕೆರೆ ಏರಿಯ ಆವರಣದಲ್ಲಿ ಗುರುವಾರ ಶ್ರೀ ಧರ್ಮಸ್ಥಳ ಯೋಜನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಈ ಹಿಂದೆ ವಾತವರಣದಲ್ಲಿ ಉತ್ತಮ ಆಮ್ಲಜನಕ ದೊರಕುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸರದ ಅಸಮತೋಲನದಿಂದ ಆಮ್ಲಜನಕದ ಕೊರತೆ ಎದುರಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಆಮ್ಲಜನಕವನ್ನು ಖರೀದಿಸಬೇಕಾಗುತ್ತದೆ. ಆದ್ದರಿಂದ ಶಾಲಾ ಹಂತದಲ್ಲೇ ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜತೆಗೆ ಪರಿಸರದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಪರಿಸರದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಪ್ರದೀಪ್, ಸೇವಾ ಪ್ರತಿನಿಧಿ ಕಲಾವತಿ, ಮುಖ್ಯ ಶಿಕ್ಷಕಿ ಶಿವಮ್ಮ, ಶಿಕ್ಷಕರಾದ ಶಿವಕುಮಾರ್, ಸಾವುಕರಾಜು ಇತರರಿದ್ದರು.