

ಸಂಡೂರು: ಮರ-ಗಿಡ ಬೆಳೆಸಿ ಸಂರಕ್ಷಣೆ ಮಾಡುವುದರಿಂದ ಅರಣ್ಯ ಸಂಪತ್ತು ಹೆಚ್ಚುತ್ತದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಹಬ್ಬಾಷಾ ಹೇಳಿದರು.
ತಾಲೂಕಿನ ಸೋವೇನಹಳ್ಳಿಯಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಯಡಿಯಲ್ಲಿ ಕೌಶಲ ಅಭಿವೃದ್ಧಿ ಮತ್ತು ಅರಿವು ಆಂದೋಲನ ಉದ್ದೇಶಿಸಿ ಬುಧವಾರ ಮಾತನಾಡಿದರು.
ಅರಣ್ಯ ಸಂಪತ್ತು ಹೆಚ್ಚಿಸಲು ರೈತರು ತಮ್ಮ ಹೊಲ-ಗದ್ದೆಗಳ ಬದುವುಗಳಲ್ಲಿ ಅರಣ್ಯ ಗಿಡಗಳನ್ನು ಬೆಳೆಸಬೇಕು. ಪರಿಸರ ಅಸಮತೋಲನ ಹೆಚ್ಚಿದ್ದರಿಂದ ಅತಿವೃಷ್ಟಿ-ಅನಾವೃಷ್ಟಿಗಳು ಕಾಡುತ್ತಿವೆ. ಇಲಾಖೆಯಿಂದ ರೋಡ್ ಸೈಡ್, ಕಾದಿಟ್ಟ ಅರಣ್ಯ ಪ್ರದೇಶಗಳಲ್ಲಿ ಪ್ಲಾಂಟೇಶನ್ ಸೇರಿದಂತೆ ಹಲವಾರು ರೀತಿಯಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಇದರಿಂದ ಪರಿಸರ ಅಸಮತೋಲನವನ್ನು ಸರಿಪಡಿಸಿದಂತಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಗಂಗಾಧರ ಮಾತನಾಡಿ, ಅರಣ್ಯ ಕೃಷಿ ಪ್ರೋತ್ಸಾಹದಡಿ ಶ್ರೀಗಂಧ, ಮಹಾಗನಿ, ಮಾವು, ಕೋಕ್, ಬಿದಿರು, ಹುಣಿಸೆ ಮತ್ತಿತರ ಗಿಡಗಳನ್ನು ಹೊಲಗಳ ಬದುವುಗಳಲ್ಲಿ ಹಾಗೂ ಜಮೀನುಗಳಲ್ಲಿ ಬೆಳೆಯಬಹುದು. ಇತ್ತೀಚೆಗೆ ಮಾರುಕಟ್ಟೆ ಸಹ ವಿಸ್ತಾರಗೊಳ್ಳುತ್ತಿದೆ ಆದಕ್ಕೆ ತಕ್ಕಂತೆ ಇಲಾಖೆ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ ಎಂದರು.
ಸೋವೇನಹಳ್ಳಿ ಗ್ರಾಪಂ ಅಧ್ಯಕ್ಷ ಕಮಲಮ್ಮ ಸಿದ್ದಲಿಂಗಪ್ಪ, ಉಪಾಧ್ಯಕ್ಷೆ ಕಾಳಮ್ಮ ಪರಶುರಾಮ್, ಮಾಜಿ ಅಧ್ಯಕ್ಷ ಜಿ.ಅಂಜಿನಪ್ಪ, ಹಂಪಕ್ಕ ಹೇಮಣ್ಣ, ಮಾಜಿ ಉಪಾಧ್ಯಕ್ಷೆ ಸಣ್ಣ ಶಾರದಮ್ಮ ನಾರಪ್ಪ, ಸದಸ್ಯರಾದ ಗೀತಮ್ಮ ಪ್ರಕಾಶ, ಶಾರದಮ್ಮ ನಾಗಪ್ಪ, ಪಾರ್ವತಮ್ಮ ನಾಗೇಶ, ಶಶಿಕಲಾ ಸಿದ್ದಲಿಂಗಪ್ಪ ಇತರರಿದ್ದರು.