

ಬ್ಯಾಡಗಿ: ಸಾರ್ವಜನಿಕ ಜಾಗ ಹಾಗೂ ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದು ಹಾಗೂ ಪಟ್ಟಣದಲ್ಲಿ ಚರಂಡಿಗಳ ಮೇಲೆ ಕಟ್ಟಡ ನಿರ್ವಿುಸಿಕೊಂಡಿರುವುದರ ವಿರುದ್ಧ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ತಿಳಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಡಗಿಯಲ್ಲಿ ಕೆಲವರು ಪುರಸಭೆ ಹಾಗೂ ಸರ್ಕಾರಿ ಜಾಗ, ಉದ್ಯಾನಗಳನ್ನು ಒತ್ತುವರಿ ಮಾಡಿದ್ದಾರೆ. ಕೆಲವರು ಚರಂಡಿ ಮೇಲೆ ಮನೆ ನಿರ್ವಿುಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ. ಚರಂಡಿ ನೀರು ತೆರಳಲು ಅಡೆತಡೆ ಉಂಟಾಗಿ ರಸ್ತೆಯ ಮೇಲೆ ಹರಿದು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಎಂದರು. ಎಲ್ಲ ಸದಸ್ಯರು ಒತ್ತುವರಿ ತೆರವಿಗೆ ಸಹಕಾರ ನೀಡಬೇಕು ಎಂದರು.
ಬಸವರಾಜ ಛತ್ರದ ಮಾತನಾಡಿ, ಪುರಸಭೆ ವತಿಯಿಂದ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ವಾರ್ಡ್ ಸದಸ್ಯರು ಹಾಗೂ ಸ್ಥಳೀಯ ಆಸಕ್ತರನ್ನು ಒಳಗೊಂಡು ಉದ್ಯಾನಗಳ ಅಭಿವೃದ್ಧಿ ಸಮಿತಿ ರಚಿಸಿ ಎಲ್ಲರಿಗೂ ಜವಾಬ್ದಾರಿ ಕೊಡಬೇಕು ಎಂದರು.
ಶಂಕರ ಕುಸಗೂರು ಮಾತನಾಡಿ, ಶಿವಪುರ, ಇಸ್ಲಾಂಪುರ, ಕೋಳೂರು ಕ್ಯಾಂಪ್, ಬೆಟ್ಟದ ಮಲ್ಲೇಶ್ವರ ಬಡಾವಣೆಗಳಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ, ಸರ್ಕಾರ ಮನೆ ಬಿದ್ದ ಫಲಾನುಭವಿಗಳಿಗೆ ಮಾತ್ರ ಪರಿಹಾರ ನೀಡಿದೆ. ನೀರು ನುಗ್ಗಿ ಹಾನಿಗೊಂಡವರ ಗತಿ ಏನು..? ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಸರ್ಕಾರ ಮನೆ ಬಿದ್ದ ಫಲಾನುಭವಿಗಳಿಗೆ 5 ಸಾ.ರೂ. ನಿಂದ 1.20 ಲಕ್ಷ ರೂ. ಪರಿಹಾರ ಘೊಷಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರೆ ಪರಿಹಾರಕ್ಕಾಗಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಶಿವರಾಜ ಅಂಗಡಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಲ್ಲಲ್ಲಿ ಕಳಪೆಯಾಗಿದೆ. ಪೈಪ್ಲೈನ್ಗಾಗಿ ರಸ್ತೆಗಳನ್ನು ಕಿತ್ತುಹಾಕಿದ ಪರಿಣಾಮ ಬ್ಯಾಡಗಿಯಲ್ಲಿ ಓಡಾಡಲು ಆಗುತ್ತಿಲ್ಲ. ಹೀಗಾದ್ರೆ ಸರ್ಕಾರದ ಯೋಜನೆ ಯಶಸ್ವಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ವಿನಯಕುಮಾರ ಹಿರೇಮಠ, ಸರೋಜ ಉಳ್ಳಾಗಡ್ಡಿ, ಮಲ್ಲವ್ವ ಪಾಟೀಲ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಹನುಮಂತಪ್ಪ ಮಾಳಗಿ ಇತರರಿದ್ದರು.
ಹೆಚ್ಚಿನ ಮಳೆ ಬಿದ್ದ ಪರಿಣಾಮ ಪಟ್ಟಣದ ಗುಡ್ಡದ ಪ್ರದೇಶದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಕಾಲುವೆಗಳನ್ನು ಕೆಲವರು ಮುಚ್ಚಿಕೊಂಡ ಪರಿಣಾಮ ನೀರು ಸರಿಯಾಗಿ ಹರಿಯುತ್ತಿಲ್ಲ. ಮಳೆ ಹಾನಿ ಕುರಿತು ಖುದ್ದಾಗಿ ಸಂತ್ರಸ್ತರ ಮನೆಗಳಿಗೆ ತೆರಳಿ ಮಾಹಿತಿ ಪಡೆದಿದ್ದೇನೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕಾಳಜಿ ಕೇಂದ್ರ ಕೂಡ ತೆರೆಯಲಾಗಿದೆ. ರಾಜಕಾಲುವೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ. | ಬಾಲಚಂದ್ರಗೌಡ್ರ ಪಾಟೀಲ, ಪುರಸಭೆ ಅಧ್ಯಕ್ಷ