

ದೇವನಹಳ್ಳಿ: ಪ್ರಧಾನಿ ಮೋದಿ ಕಂಡ ಬಯಲುಶೌಚಮುಕ್ತದ ಕನಸು ಕಾರ್ಯರೂಪಕ್ಕೆ ಬಂದಿದೆ. ಶೌಚಗೃಹದ ಮಹತ್ವ ಸಾರುವುದರೊಂದಿಗೆ ಕಾರ್ಯರೂಪಕ್ಕೆ ಶ್ರಮಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ನಟಿ ಹಾಗೂ ಕೋವಿಡ್-19 ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.
ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರು ಪರಿಸರ ಸಂಘ ನಿರ್ಮಿಸಿಕೊಟ್ಟಿರುವ 30 ಸಾವಿರ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ಸಂಗ್ರಹಣ ಸಂಪ್ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿಲ್ಲದಿದ್ದರೆ ಶೌಚಗೃಹವಿದ್ದರೂ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ತಂಡ ದೊಡ್ಡ ಸಂಪ್ ನಿರ್ಮಿಸಿಕೊಟ್ಟಿದೆ. ಇವರ ದೂರದೃಷ್ಟಿ ಮೆಚ್ಚುಗೆಗೆ ಅರ್ಹ ಎಂದರು.
ಕರೊನಾದೊಂದಿಗೆ ಜೀವನ ನಡೆಸಬೇಕಾಗಿದೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕರೊನಾ ಹತೋಟಿಯಲ್ಲಿದೆ. ಅದರೆ ಎಚ್ಚರ ತಪ್ಪಬಾರದು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಪರಿಸರ ಸಂಘದ ಅಧ್ಯಕ್ಷ ಎ.ಜಿ. ನಡದೂರ್ ಮಾತನಾಡಿ, ನಮ್ಮ ಸಂಘ 1986ರಲ್ಲಿ ಸ್ಥಾಪಿತವಾಯಿತು. ಆರಂಭದಲ್ಲಿ ಒಂದಷ್ಟು ಕೆರೆಗಳ ಅಭಿವೃದ್ಧಿ ಜತೆಗೆ ವಿಚಾರ ಸಂಕಿರಣ ನಡೆಸಲಾಯಿತು. ಹಿಂದೆ ಓ.ಇ.ಎಸ್ಮಾಲೆಯ ಸುಬ್ಬಯ್ಯನವರು ದೇವನಹಳ್ಳಿ ಪರಿಚಯಿಸಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದರು. ಆ ವೇಳೆ ಹಿಂದಿನ ಬಿಇಒ ಗಾಯತ್ರಿದೇವಿ ಪರಿಚಯವಾಗಿ ಈ ಶಾಲೆಯಲ್ಲಿನ ನೀರಿನ ಸಮಸ್ಯೆ ಬಗ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯ ಸಾಕಾರವಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಕೆಎಸ್‌ಸಿಎಸ್‌ಆರ್ ವಿಜ್ಞಾನಿ ವಿಜಯ್, ವರ್ಲಿ ಪೆಯಿಂಟ್ ದಾನಿ ಹಾಗೂ ಟ್ರಸ್ಟಿ ಉಷಾ, ಪರಿಸರ ಸಂಘದ ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ಕುಮಾರ್, ನಿರ್ದೇಶಕ ತಿರುಮಲರಾವ್, ಒಇಎಸ್ ಅಧ್ಯಕ್ಷ ಕೆ.ಎಂ. ಸುಬ್ಬಯ್ಯ, ಯೋಜನಾ ವ್ಯವಸ್ಥಾಪಕ ಗುಂಡಣ್ಣ, ಪ್ರಭಾರಿ ಮುಖ್ಯ ಶಿಕ್ಷಕ ಚಿನ್ನಸ್ವಾಮಿಗೌಡ, ನಿವೃತ್ತ ಮುಖ್ಯ ಶಿಕ್ಷಕಿ ನಿರ್ಮಲಾಕುಮಾರಿ, ಸಹ ಶಿಕ್ಷಕ ಎಚ್.ಆರ್.ಸ್ವಾಮಿ, ಸಿ.ಮುನಿವೀರಪ್ಪ, ಬಿ.ವಿ.ವೆಂಕಟರಾಮಯ್ಯ, ಆಶಾ, ಸಂಗೀತಾ ನಾಯಕ್, ರೇಣುಕಮ್ಮ ಇದ್ದರು.