

ಸುಭಾಸ ಧೂಪದಹೊಂಡ ಕಾರವಾರ
ಶಿರಸಿ ತಾಲೂಕಿನ ಮುಂಡಿಗೆ ಕೆರೆಗೆ ಸಂತಾನೋತ್ಪತ್ತಿಗೆ ಬಂದ ಬೆಳ್ಳಕ್ಕಿಗಳು ಈ ವರ್ಷ ಅವಧಿಗೂ ಮುಂಚೆ ವಾಪಸಾಗಿವೆ. ಇವುಗಳು ಕಟ್ಟಿದ ಗೂಡುಗಳನ್ನು ತೊರೆದು ಹೋಗಿದ್ದು, ಇದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ಅಂದಾಜಿಸಲಾಗಿದೆ. ಬರದ ಮುನ್ಸೂಚನೆಯೇ ಎಂಬ ಆತಂಕ ಮೂಡಿದೆ.
ಸೋಂದಾ ಗ್ರಾಪಂ ವ್ಯಾಪ್ತಿಯ ಬಾಡಲಕೊಪ್ಪ ಮಜರೆಯ ಸರ್ವೇ ನಂಬರ್ 141 ರಲ್ಲಿ ಸುಮಾರು 4.12 ಎಕರೆ ವಿಸ್ತೀರ್ಣದಲ್ಲಿರುವ ಮುಂಡಿಗೆ ಕೆರೆ ನೂರಾರು ಬೆಳ್ಳಕ್ಕಿಗಳ ಹೆರಿಗೆ ಮನೆ. ಪ್ರತಿ ವರ್ಷ ದೇಶದ ವಿವಿಧ ಭಾಗಗಳಿಂದ ಬೆಳ್ಳಕ್ಕಿಗಳು ಮಳೆಗಾಲ ಪ್ರಾರಂಭಕ್ಕೂ ಪೂರ್ವ ಇಲ್ಲಿಗೆ ಬಂದು ಕಸ, ಕಡ್ಡಿಗಳಿಂದ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳಿಗೆ ಹಾರಲು ಕಲಿಸಿಕೊಂಡು ಸುಮಾರು ಅಕ್ಟೋಬರ್ ಅಂತ್ಯಕ್ಕೆ ಮರಿಗಳೊಟ್ಟಿಗೆ ವಾಪಸಾಗುತ್ತವೆ.
ಪ್ರತಿ ವರ್ಷ ಕನಿಷ್ಠ 90 ರಿಂದ 100ರವರೆಗೂ ಪಕ್ಷಿಗಳು ಇಲ್ಲಿನ ಮುಂಡಿಗೆ ಗಿಡಗಳ ಮೇಲೆ ಸಂಸಾರ ಹೂಡುತ್ತವೆ. ಅದೆಷ್ಟೋ ವರ್ಷಗಳಿಂದ ಇಲ್ಲಿನ ಜನ ಬೆಳ್ಳಕ್ಕಿಗಳ ಕುಟುಂಬ ವಿಸ್ತರಣೆಯ ಈ ಪ್ರಕ್ರಿಯೆಯನ್ನು ನೋಡಿಕೊಂಡು ಬಂದಿದ್ದಾರೆ. 1980ರ ಹೊತ್ತಿಗೆ ಪಕ್ಷಿ ತಜ್ಞ ಪಿ.ಡಿ. ಸುದರ್ಶನ್ ಅವರು ಈ ತಾಣವನ್ನು ಗುರುತಿಸಿದರು. 1995ರಿಂದ ಸೋಂದಾ ಜಾಗೃತ ವೇದಿಕೆ ಈ ತಾಣವನ್ನು ಸಂರಕ್ಷಿಸಿಕೊಂಡು ಬಂದಿದೆ. ಇದೇ ವರ್ಷ ಜನವರಿಯಲ್ಲಿ ಇದನ್ನು ಪಕ್ಷಿ ಸಂರಕ್ಷಿತ ಪ್ರದೇಶ ಎಂದು ಅರಣ್ಯ ಇಲಾಖೆ ೋಷಿಸಿ, ಲಕ ಅನಾವರಣ ಮಾಡಿದೆ.
ವರ್ಷದಂತೆ ಈ ಬಾರಿಯೂ ಜೂನ್ 24ರ ಹೊತ್ತಿಗೆ ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಬಂದು, ಗೂಡು ಕಟ್ಟಿದ್ದವು. ಆದರೆ, ಅದೇನಾಯಿತೋ ತಿಳಿಯದು. ಆಗಸ್ಟ್ 2ರಿಂದ ಭಾಗಶಃ ಪಕ್ಷಿಗಳು ಇಲ್ಲಿಂದ ಜಾಗ ಖಾಲಿ ಮಾಡಲು ಆರಂಭಿಸಿದವು. ಸದ್ಯ ಸುಮಾರು 15 ಪಕ್ಷಿಗಳು ಉಳಿದುಕೊಂಡಿವೆ. ಆರಂಭದಲ್ಲೇ ಗೂಡು ಕಟ್ಟಿ ಇಟ್ಟ ಮೊಟ್ಟೆಗಳು ಈಗ ಮರಿಯಾಗಿವೆ. ಅಂಥ ಪಕ್ಷಿಗಳು ಮಾತ್ರ ಉಳಿದುಕೊಂಡಿದ್ದು, ತಾಯಿ ಬೆಳ್ಳಕ್ಕಿಗಳು ಅವುಗಳ ಆರೈಕೆ ಪ್ರಾರಂಭಿಸಿವೆ.
ಜಾಗೃತ ವೇದಿಕೆಯ ರತ್ನಾಕರ ಹೆಗಡೆ ಅವರು ಮುಂಡಿಗೆ ಕೆರೆಯ ಪಕ್ಷಿಗಳ ಚಲನವಲನಗಳನ್ನು ಕಳೆದ ಸುಮಾರು 2 ದಶಕಗಳಿಂದ ಗಮನಿಸಿ, ದಾಖಲು ಮಾಡುತ್ತಿದ್ದಾರೆ. ಮಾತ್ರವಲ್ಲ ಇಲ್ಲಿ ಮಳೆಯ ಮಾಹಿತಿಯನ್ನೂ ಅವರು ಲೆಕ್ಕ ಇಡುತ್ತಿದ್ದಾರೆ. 2007ರಲ್ಲಿ ಒಮ್ಮೆ ಅವು ಹೀಗೆ ಮಾಡಿದ್ದು ಬಿಟ್ಟರೆ ಬೇರ‌್ಯಾವಾಗಲೂ ಹಕ್ಕಿಗಳು ಈ ರೀತಿ ಮಾಡಿದ್ದಿಲ್ಲ ಎನ್ನುತ್ತಾರವರು.
ಹಕ್ಕಿಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿಗೆ ಸುರಕ್ಷಿತ ತಾಣ, ಅನುಕೂಲಕರ ವಾತಾವರಣ ಹುಡುಕುತ್ತವೆ. ಅಲ್ಲದೆ, ಸಮೀಪದಲ್ಲಿ ತಮಗೆ ಬೇಕಾದ ಆಹಾರ ಸಿಗುತ್ತದೆಯೇ ಎಂಬುದನ್ನು ನೋಡುತ್ತವೆ. ಈ ಎಲ್ಲವೂ ಸಿಗುವ ಜಾಗದಲ್ಲಿ ಅವು ಗೂಡು ಕಟ್ಟುತ್ತವೆ. ಪ್ರತಿ ಪ್ರಭೇದದ ಪಕ್ಷಿಯೂ ಅಂಥ ಸ್ಥಳಗಳನ್ನು ಗುರುತಿಸಿಕೊಂಡಿರುತ್ತದೆ. ಅದಕ್ಕಾಗಿ ಸಾವಿರಾರು ಕಿಮೀ ಬೇಕಾದರೂ ವಲಸೆ ಹೋಗುತ್ತವೆ. ಅವುಗಳ ಸಂತಾನೋತ್ಪತ್ತಿಯ ಸ್ಥಳಗಳು ಹಲವಾರು ತಲೆಮಾರಿನಿಂದಲೂ ಒಂದೇ ಆಗಿರುತ್ತವೆ. ತಮಗೆ ಯಾವುದೋ ತೊಂದರೆ ಉಂಟಾಗಬಹುದು ಎಂಬ ಸಣ್ಣ ಮುನ್ಸೂಚನೆ ಇದ್ದರೂ ಅವು ಸ್ಥಳ ಬದಲಿಸುತ್ತವೆ ಎನ್ನುತ್ತಾರೆ ಪಕ್ಷಿ ತಜ್ಞರು.
ಹಕ್ಕಿಗಳಿಗೆ ಪರಿಸರದ ಸೂಕ್ಷ್ಮಗಳ ಅರಿವಿರುತ್ತವೆ. ಮುಂಡಿಗೆ ಕೆರೆಗೆ ಬೆಳ್ಳಕ್ಕಿಗಳ ಆಗಮನವಾದ ಐದಾರು ದಿನದಲ್ಲಿ ಮುಂಗಾರು ಮಳೆ ಪ್ರಾರಂಭವಾಗುವುದನ್ನು ನಾನು ದಾಖಲಿಸಿದ್ದೇನೆ. ಆದರೆ, ಈ ಬಾರಿ ಏನಾಯಿತೋ ತಿಳಿಯದು, ಅವುಗಳು ಆಗಸ್ಟ್ ಮೊದಲ ವಾರದಿಂದಲೇ ಹಾರಿ ಹೋಗಲು ಪ್ರಾರಂಭಿಸಿದವು. ಈಗ ಕೆಲವೇ ಪಕ್ಷಿಗಳು ಉಳಿದುಕೊಂಡಿವೆ.I ರತ್ನಾಕರ ಹೆಗಡೆ, ಬಾಡಲಕೊಪ್ಪ……….