ಅರಮನೆ ಪರಂಪರೆ ಉಳಿಸಿಕೊಳ್ಳುವಲ್ಲಿ ವಕೀಲರ ಶ್ರಮ ಅಪಾರ

HUN-MAR-20-2(BJP ROADSHOW)
ಹುಣಸೂರು ನಗರದ ಜೆಎಲ್‌ಬಿ ರಸ್ತೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತಯಾಚಿಸಿದರು. ಎಲ್.ಆರ್.ಮಹದೇವಸ್ವಾಮಿ, ರಾಮಚಂದ್ರ, ಹಿರೀಕ್ಯಾತನಹಳ್ಳಿ ಸತೀಶ್, ನಾಗಣ್ಣಗೌಡ ಇದ್ದರು.
Published on

ಮೈಸೂರು: ನಮ್ಮ ಕುಟುಂಬಕ್ಕೂ, ವಕೀಲರಿಗೂ ಅವಿನಾಭಾವ ಸಂಬಂಧವಿದ್ದು, ಅರಮನೆ ಪರಂಪರೆ ಉಳಿಸಿಕೊಳ್ಳಲು ಅವರ ಶ್ರಮ ಹೆಚ್ಚಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘಕ್ಕೆ ಭೇಟಿ ನೀಡಿ, ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಕೀಲರಿಗೆ ಸದಾ ಚಿರಋಣಿಯಾಗಿದ್ದೇನೆ. ಮೈಸೂರಿನ ಪರಂಪರೆ, ನ್ಯಾಯಾಂಗ ವ್ಯವಸ್ಥೆಯನ್ನು ಉಳಿಸುತ್ತಿರುವ ನಿಮಗೂ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಬಗೆಹರಿಸಲು ನಿಮ್ಮೊಟ್ಟಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ವಕೀಲರ ರಾಜ್ಯ ಸಂಘದ ಸದಸ್ಯ ಚಂದ್ರಮೌಳಿ ಮಾತನಾಡಿ, ವಕೀಲರ ಸಮುದಾಯಕ್ಕೂ, ಅರಮನೆಗೂ ಹಲವಾರು ವರ್ಷಗಳಿಂದ ಉತ್ತಮ ಬಾಂಧವ್ಯವಿದೆ. ಆರಂಭದಲ್ಲಿ ರಾಜವಂಶಸ್ಥರು ಸಾಮಾನ್ಯರೊಟ್ಟಿಗೆ ಬೆರೆಯುತ್ತಾರಾ ಎಂಬ ಗೊಂದಲಗಳು ಸೃಷ್ಟಿಯಾಗಿತ್ತು. ಆದರೆ, ಯದುವೀರ್ ಹಿನ್ನೆಲೆಯನ್ನು ನೋಡಿದಾಗ ಅವರು ಸಾಮಾನ್ಯರಲ್ಲಿ ಸಾಮಾನ್ಯರು ಎಂದು ತಿಳಿಯುತ್ತದೆ ಎಂದರು.

ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ತಮ್ಮ ಸಂಸದರ ಅನುದಾನದಿಂದ ಹಣ ನೀಡಿದ್ದರಿಂದ ಸಂಘದ ಕಟ್ಟಡ ನಿರ್ಮಾಣವಾಗಿದೆ. ಅವರು ಜನರಿಗೆ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತಾರೆ. ಅವರಂತೆ ಯದುವೀರ್ ಅವರು ಸಾಮಾನ್ಯರಂತೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ ಎಂದರು.

ಅದ್ದೂರಿ ಸ್ವಾಗತ: ಯದುವೀರ್ ಅವರು ನ್ಯಾಯಾಲಯ ಆವರಣಕ್ಕೆ ಆಗಮಿಸುತ್ತಿದ್ದಂತೆ ವಕೀಲರು ನಾದಸ್ವರದ ಮೂಲಕ ಸ್ವಾಗತಿಸಿ ಪಟಾಕಿ ಸಿಡಿಸಿದರು. ಯದುವೀರ್‌ಗೆ ಜಯವಾಗಲಿ ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಈ ವೇಳೆ ವಕೀಲರು ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹಸ್ತಲಾಘವ ಮಾಡುವ ಮೂಲಕ ಹರ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net