

ಕಡೂರು: ಮಕ್ಕಳಿಗೆ ಎರಡನೇ ತಾಯಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪೋಷಣ್ ಅಭಿಯಾನದಡಿ ಮಂಗಳವಾರ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಪೋನ್ ಮತ್ತು ಗ್ರೋತ್ ಮಾನಿಟರಿಂರ್ ಯಂತ್ರಗಳನ್ನು ವಿತರಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಇತ್ತೀಚೆಗೆ ಗ್ರಾಚ್ಯುಯಿಟಿ ಸೌಲಭ್ಯ ನೀಡಿರುವುದು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಒತ್ತಡಗಳ ನಡುವೆ ಕಡಿಮೆ ಸಂಭಾವನೆ ದೊರೆಯುತ್ತಿದ್ದರೂ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಬಡವರಿಗೆ ಸೌಲಭ್ಯಗಳನ್ನು ನೀಡಿದ ಮಾತ್ರಕ್ಕೆ ಇತರೆ ಅಭಿವೃದ್ದಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷದವರ ಹೇಳಿಕೆಯಲ್ಲಿ ಹುರುಳಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡುವುದಕ್ಕೂ ಆಕ್ಷೇಪಿಸುವ ಇವರು ತಮ್ಮ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳಿಲ್ಲದೆ ಉಳಿತಾಯವಾಗುತ್ತಿದ್ದ ಹಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಯಿಟಿ ಮತ್ತಿತರ ಸೌಲಭ್ಯ ನೀಡಲು ಯೋಗ್ಯತೆಯಿರಲಿಲ್ಲವೆ?. ಈಗ ನಮ್ಮ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಯಿಟಿ ಸೌಲಭ್ಯ ನೀಡಿದೆ. ಅವರ ಇನ್ನುಳಿದ ಬೇಡಿಕೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಲೋಕೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಹೆಣ್ಣುಮಕ್ಕಳ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸ್ಮಾರ್ಟ್ ಪೋನ್‌ಗಳು ಮತ್ತು ಹಲವಾರು ಕಾರ್ಯಕ್ರಮಗಳ ಪ್ರಗತಿ ಗಮನಿಸಲು ಯಂತ್ರಗಳನ್ನು ವಿತರಿಸಲಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್,ಸಿಡಿಪಿಒ ಶಿವಪ್ರಕಾಶ್, ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.