

ಹೊಸಕೋಟೆ : ನಗರವನ್ನು ಸ್ವಚ್ಛತೆಯಾಗಿಡುವ ದೃಷ್ಟಿಯಿಂದ ಪ್ರತಿದಿನ ಅವಿರತ ಶ್ರಮಿಸುವ ಪೌರಕಾರ್ಮಿಕರ ಕರ್ತವ್ಯಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜನನಿ ಚಾರಿಟೆಬಲ್ ಟ್ರಸ್ಟ್ನಿಂದ ಬಿ.ಎನ್.ಬಚ್ಚೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಉಡುಗೊರೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿತ್ಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿ ನಾವೆಲ್ಲ ಆರೋಗ್ಯವಂತರಾಗಿರಲು ಪೌರಕಾರ್ಮಿಕರ ಸೇವೆ ಹೆಚ್ಚಾಗಿದೆ. ಪೌರಕಾರ್ಮಿಕರ ದಿನದಂದು ಮಾತ್ರವಲ್ಲ ನಿತ್ಯ ಅವರನ್ನು ಸ್ಮರಿಸಬೇಕು. ಸೂಕ್ತ ವೇದಿಕೆಗಳಲ್ಲಿ ಅವರನ್ನು ಅವರ ಸೇವೆಯನ್ನು ಗುರುತಿಸಿ ಗೌರವಿಸಿದರೆ ನಗರದ ನಾಗರಿಕರು ಮತ್ತಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಜನನಿ ಚಾರಿಟಬಲ್ ಟ್ರಸ್ಟ್ ನವರಾತ್ರಿ ವೇದಿಕೆಯಲ್ಲಿ ಪೌರಕಾರ್ಮಿಕರನ್ನು ಗೌರವಿಸುತ್ತಿರುವ ಕಾರ್ಯ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದರು.
ಜನನಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ಮಾತನಾಡಿ, 12 ವರ್ಷಗಳ ಹಿಂದೆ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಆ ದೇವಿಯಲ್ಲಿ ನಮ್ಮ ತಾಯಿಯನ್ನು ಕಾಣುವ ಹಾಗೂ ಆಶೀರ್ವಾದ ಪಡೆಯುವ ಉದ್ದೇಶದಿಂದ ನವರಾತ್ರಿ ಪ್ರಾರಂಭಿಸಲಾಯಿತು. 12 ವವರ್ಷಗಳಿಂದ ಜನನಿ ಚಾರಿಟಬಲ್ ಟ್ರಸ್ಟ್ ಎಲ್ಲ ಸದಸ್ಯರು ಸಾರ್ವಜನಿಕರಿಂದ ಚಂದ ವಸೂಲಿ ಮಾಡದೆ ವೈಯಕ್ತಿಕವಾಗಿ ಹಣ ವಿನಿಯೋಗ ಮಾಡಿ ನವರಾತ್ರಿ ಆಚರಿಸುತ್ತಿದ್ದೇವೆ. ಆದರೆ ಈ ಬಾರಿ ತಾಯಿ ಸಮಾನರಠಿಾದಂತಹ ಮಹಿಳಾ ಪೌರಕಾರ್ಮಿಕರನ್ನು ಗುರುತಿಸಿ ನವರಾತ್ರಿ ವೇದಿಕೆಯಲ್ಲಿ ಅವರಿಗೆ ಉಡುಗೊರೆ ಹಾಗೂ ಸೀರೆ ವಿತರಣೆ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.