ದಸರಾ ವಸ್ತುಪ್ರದರ್ಶನ ಈ ಬಾರಿ ಇನ್ನಷ್ಟು ವೈವಿಧ್ಯ

41
Published on

ಆರ್.ಕೃಷ್ಣ ಮೈಸೂರು
ಪ್ರತಿ ಬಾರಿಯೂ ಖಾಲಿ ಮಳಿಗೆಗಳ ಉದ್ಘಾಟನೆ ಎಂಬ ಅಪವಾದದಿಂದ ಈ ಬಾರಿ ದಸರಾ ವಸ್ತುಪ್ರದರ್ಶನ ಹೊರಬರಲಿದೆ. ಶೇ.75ಕ್ಕೂ ಹೆಚ್ಚು ಮಳಿಗೆಗಳು ದಸರಾ ಉದ್ಘಾಟನೆ ದಿನವೇ ಸಿದ್ಧವಿರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಹೆಚ್ಚು ಜನರನ್ನು ಆಕರ್ಷಿಸುವ ಸಲುವಾಗಿ ವಸ್ತುಪ್ರದರ್ಶನವನ್ನು ವೈವಿಧ್ಯಮಯಗೊಳಿಸುತ್ತಿರುವುದು ವಿಶೇಷವಾಗಿದೆ.
ಅ.15ರಂದು ವಸ್ತುಪ್ರದರ್ಶನ ಆರಂಭಗೊಂಡು ಸುಮಾರು 90 ದಿನ ಇರಲಿದೆ. ನಿತ್ಯ ಸುಮಾರು 30 ಸಾವಿರದಷ್ಟು ಜನರು ಆಗಮಿಸಲಿದ್ದು, ರಜೆ, ವಿಶೇಷ ದಿನಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಜನರನ್ನು ಆಕರ್ಷಿಸಲು ನಾನಾ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಆಕರ್ಷಣೆಗಳು ಸಹ ಇರಲಿವೆ. ಎಂದಿನಂತೆ ‘ಎ’ ಬ್ಲಾಕ್‌ನಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಪ್ರದರ್ಶನ, ಮಾರಾಟ ಇರಲಿದೆ. ‘ಬಿ’ ಬ್ಲಾಕ್‌ನಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿಸಿಕೊಡುವ ಮಳಿಗೆಗಳು, ‘ಸಿ’ ಬ್ಲಾಕ್‌ನಲ್ಲಿ ಮಕ್ಕಳನ್ನು ರಂಜಿಸುವ ಅಮ್ಯೂಜ್‌ಮೆಂಟ್ ಪಾರ್ಕ್ ಇರಲಿದೆ.
ಮಳಿಗೆಗಳ ನಿರ್ಮಾಣ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ದೀಪಾಲಂಕಾರ, ದುರಸ್ತಿ, ಶೌಚ ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲಸೌಲಭ್ಯ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಮುಖ್ಯದ್ವಾರಕ್ಕೆ ಈಗಾಗಲೇ ಬಣ್ಣದ ಕೆಲಸ, ಫೌಂಟೇನ್, ಚರಂಡಿಗಳನ್ನು ಶುಚಿಗೊಳಿಸಲಾಗುತ್ತಿದೆ. ಪಾರ್ಕ್‌ಗಳನ್ನು ವಿನ್ಯಾಸಗೊಳಿಸುವ ಕಾರ್ಯ ನಡೆಯುತ್ತಿದೆ. ಅಮ್ಯೂಸ್‌ಮೆಂಟ್, ಫುಡ್‌ಕೋರ್ಟ್, ಸಂಗೀತ ಕಾರಂಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಚುರುಕುಗೊಂಡಿದೆ.
ಈ ಬಾರಿ ಮರಳು ಕಲಾಕೃತಿಗೆ ವಿಶೇಷ ರೂಪ ನೀಡಲು ಪ್ರಾಧಿಕಾರ ನಿರ್ಧರಿಸಿದೆ. ಸರ್ಕಾರದ ಐದು ಗ್ಯಾರಂಟಿಗಳನ್ನು ಮರಳು ಕಲಾಕೃತಿಯಲ್ಲಿ ರಚಿಸಲಾಗುತ್ತದೆ. ಅಲ್ಲದೆ, ದೇಶದ ಹೆಮ್ಮೆಯ ಚಂದ್ರಯಾನಕ್ಕೂ ಮರಳು ಸ್ಪರ್ಶ ಸಿಗಲಿದೆ. ಇದರೊಂದಿಗೆ ಗುತ್ತಿಗೆ ಪಡೆದವರು ಸಹ ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಾಕರ್ಷಕ ವಿನ್ಯಾಸ ರೂಪಿಸಲು ನಿರ್ಧರಿಸಿದ್ದಾರೆ.
ಲಗೇಜ್ ಇಡಲು ಕೊಠಡಿ
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವುದರಿಂದ ಈ ಬಾರಿ ವಸ್ತುಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಮಹಿಳೆಯರು ಲಗೇಜ್ ಇಟ್ಟು ವಸ್ತುಪ್ರದರ್ಶನವನ್ನು ಆರಾಮವಾಗಿ ನೋಡಲು ಅನುಕೂಲವಾಗುವಂತೆ ಇದೇ ಪ್ರಥಮ ಬಾರಿಗೆ ಲಗೇಜ್ ಕೊಠಡಿ ಆರಂಭಿಸಲಾಗುತ್ತಿದೆ. ಪ್ರವೇಶ ದ್ವಾರದ ಮುಂಭಾಗ ಇದಕ್ಕಾಗಿ ಕೊಠಡಿಯನ್ನು ಪ್ರಾಧಿಕಾರ ಮೀಸಲಿಟ್ಟಿದೆ.
ನೆನಪು ಉಳಿಸಲು ‘ಸೆಲ್ಫಿ ಪಾಯಿಂಟ್’
ಸಾಮಾನ್ಯವಾಗಿ ಜನ ಸೇರುವ ಸ್ಥಳದಲ್ಲಿ ಫೋಟೋ ಕ್ರೇಜ್ ಹೆಚ್ಚಿರುತ್ತದೆ. ಹಾಗಾಗಿ, ಪ್ರಾಧಿಕಾರ ಈ ಬಾರಿ ಸೆಲ್ಫಿ ಪಾಯಿಂಟ್ ಮಾಡಲು ಮುಂದಾಗಿದ್ದು, ಈ ಮೂಲಕ ವಸ್ತುಪ್ರದರ್ಶನ ಭೇಟಿ ನೆನಪಾಗಿ ಉಳಿಸುವ ಪ್ರಯತ್ನ ನಡೆದಿದೆ.

‘ಐ ಲವ್ ದಸರಾ ಎಕ್ಸೊ’ ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಈ ಸೆಲ್ಫಿ ಪಾಯಿಂಟ್ ಇರಲಿದ್ದು, ಇದಕ್ಕಾಗಿ ನಿರ್ಮಾಣ ಕಾರ್ಯ ನಡೆದಿದೆ. ವಾರಾಂತ್ಯ, ವಿಶೇಷ ದಿನದಲ್ಲಿ ಸಾಂಸ್ಕೃತಿಕ ಕಾರ‌್ಯಕ್ರಮಕ್ಕೆ ಈಗಾಗಲೇ ಅರ್ಜಿ ಕರೆಯಲಾಗಿದ್ದು, ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಜತೆಗೆ, ಆಟೋಮೊಬೈಲ್ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, ಒಂದೊಂದು ವಾರ ಒಂದೊಂದು ಕಂಪನಿ ತಮ್ಮ ವಾಹನಗಳನ್ನು ಪ್ರದರ್ಶನಕ್ಕೆ ಇಡಲು ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ.

ಪ್ರಾಧಿಕಾರಕ್ಕೆ ಇತಿಹಾಸದಲ್ಲೇ ಗರಿಷ್ಠ ಬಿಡ್
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಇತಿಹಾಸದಲ್ಲಿಯೇ ಈ ಬಾರಿ ಗರಿಷ್ಠ ಬಿಡ್ ಅಗಿದ್ದು, ಪ್ರಾಧಿಕಾರಕ್ಕೆ 90 ದಿನದ ಪ್ರದರ್ಶನಕ್ಕೆ 2.64 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ.
ಈ ಬಾರಿ ವಸ್ತುಪ್ರದರ್ಶನದ ಗುತ್ತಿಗೆಗಾಗಿ 8.88 ಕೋಟಿ ರೂ.ಗೆ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಬೆಂಗಳೂರು ಮೂಲದ ಎರಡು ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಪ್ರತಿವರ್ಷ ಬಿಡ್ ಗೆಲ್ಲುತ್ತಲೇ ಬರುತ್ತಿರುವ ಬೆಂಗಳೂರಿನ ಫನ್‌ವರ್ಲ್ಡ್ ಇಂಡಿಯಾ ರೆಸಾರ್ಟ್ ಇಂಡಿಯಾ ಲಿ. ಬರೋಬ್ಬರಿ 11.52 ಕೋಟಿ ರೂ. ಬಿಡ್ ಮಾಡುವ ಮೂಲಕ ಈ ಬಾರಿಯೂ ವಸ್ತುಪ್ರದರ್ಶನ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದೆ.

2022ರಲ್ಲಿ ಪ್ರಾಧಿಕಾರ ವಸ್ತುಪ್ರದರ್ಶನದ ಗುತ್ತಿಗೆ 8 ಕೋಟಿ ರೂ. ನಿಗದಿ ಮಾಡಿದ್ದು, ಆದರೆ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಬಿಡ್ ಮಾಡದೆ, ಒಬ್ಬರೇ ಬಿಡ್ ಮಾಡಿದ ಪರಿಣಾಮ ಬಿಡ್ ದರಕ್ಕಿಂತ 8 ಲಕ್ಷ ರೂ. ಮಾತ್ರ ಅಂದರೆ, 8.08 ಕೋಟಿ ರೂ.ಗೆ ಫನ್‌ವರ್ಲ್ಡ್ ಬಿಡ್ ಪಡೆದಿತ್ತು. 2020 ಮತ್ತು 2021 ರಲ್ಲಿ ಕೋವಿಡ್ ಕಾರಣದಿಂದಾಗಿ ವಸ್ತುಪ್ರದರ್ಶನ ನಡೆಯದೆ ಪ್ರಾಧಿಕಾರಕ್ಕೆ ಆದಾಯವೇ ಇಲ್ಲದಂತಾಗಿತ್ತು. ಈಗ ವಸ್ತುಪ್ರದರ್ಶನ ಪ್ರಾಧಿಕಾರದ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಆದಾಯ ಬಂದಿದೆ.

ಆಕರ್ಷಕಗೊಳಿಸಲಾಗುವುದು
ಜನರು ನಿರೀಕ್ಷೆ ಇಟ್ಟುಕೊಂಡು ಬರುವುದರಿಂದ ವಸ್ತುಪ್ರದರ್ಶನವನ್ನು ಆಕರ್ಷಕಗೊಳಿಸಲಾಗುವುದು. ದಸರಾ ಆರಂಭದ ದಿನವೇ ಮಳಿಗೆಗಳನ್ನು ಉದ್ಘಾಟನೆಗೊಳಿಸಲು ಈಗಾಗಲೇ ಸಾಕಷ್ಟು ಶ್ರಮ ವಹಿಸಲಾಗಿದೆ. ವಿಭಿನ್ನತೆಯನ್ನು ಪ್ರದರ್ಶಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಪ್ರಾಧಿಕಾರದ ಇತಿಹಾಸದಲ್ಲಿಯೇ ದೊಡ್ಡ ಮೊತ್ತದ ಬಿಡ್ ಬಂದಿದ್ದು, ಹೆಚ್ಚಿನ ಆದಾಯ ದೊರೆತಿದೆ. ಗುತ್ತಿಗೆದಾರರು ಜನರನ್ನು ಆಕರ್ಷಿಸಲು ವೈವಿಧ್ಯತೆಗೆ ಮುಂದಾಗಿದ್ದಾರೆ.
ರಾಜೇಶ್ ಎಸ್.ಗೌಡ
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net