ದೊಡ್ಡಬಳ್ಳಾಪುರ: ನಗರಸಭಾ ಕಾರ್ಯಾಲಯದಲ್ಲಿ ಶುಕ್ರವಾರ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆ ಜನರಿಲ್ಲದೆ ಬಣಗುಟ್ಟಿತು. ಕುಂದುಕೊರತೆ ಆಲಿಸಲು ಶಾಸಕರು ಸಿದ್ಧರಿದ್ದರೂ ಸಾರ್ವಜನಿಕರೇ ಇಲ್ಲದೆ ಸಭೆ ಕಾಟಾಚಾರಕ್ಕೆ ಎಂಬಂತೆ ನಡೆಯಿತು. ಸಾರ್ವಜನಿಕ ಕುಂದುಕೊರತೆ ಸಭೆ ಶಾಸಕರ ಹಿಂಬಾಲಿಕರಿಗಷ್ಟೇ ಸೀಮಿತವಾದಂತೆ ಕಂಡುಬಂತು.
ಕಾಂಗ್ರೆಸ್‌ನ ಕಾರ್ಯಕರ್ತರು, ಶಾಸಕರ ಹಿಂಬಾಲಕರು ಹೊರತುಪಡಿಸಿ ಬೆರಳೇಣಿಕೆಯಷ್ಟು ಜನ ಹಾಜರಿದ್ದರು. ಸಭೆ ಹಮ್ಮಿಕೊಂಡಿದ್ದ ಕೂಗಳತೆ ದೂರದಲ್ಲೇ ಪೌರಾಯುಕ್ತರ ಕಚೇರಿಯಿದ್ದರೂ ಸಭೆಯಲ್ಲಿ ಪೌರಾಯುಕ್ತರ ಗೈರು ಎದ್ದುಕಾಣುತ್ತಿತ್ತು. ಪಕ್ಷವೊಂದರ ಕಾರ್ಯಕ್ರಮದಂತೆ ಭಾಸವಾದ ಸಭೆಯಲ್ಲಿ ಶಾಸಕರು ಭಾಷಣಕ್ಕೆ ಸೀಮಿತಗೊಳಿಸಿ ಸಭೆಯಿಂದ ನಿರ್ಗಮಿಸಿದರು.
ಕರೊನಾ ಕಾರಣದಿಂದ ಬರೊಬ್ಬರಿ 9 ತಿಂಗಳ ಬಳಿಕ ಶಾಸಕರು ಸಾರ್ವಜನಿಕ ಕುಂದುಕೊರತೆ ಸಭೆ ಏರ್ಪಡಿಸಿದ್ದರು ಆದರೆ ಸಾರ್ವಜನಿಕರಿಂದ ಸಭೆಗೆ ನೀರಸ ಪ್ರತಿಕ್ರಿಯೆ ಕಂಡುಬಂತು. ಬೆರಳೇಣಿಕೆಯಷ್ಟಿದ ಜನರು ಸಹ ಸಭೆಯಲ್ಲಿ ಅವರವರೇ ಮಾತನಾಡಿಕೊಳ್ಳುತ್ತ ಕುಳಿತಿದ್ದು, ಸಭೆಯಲ್ಲಿ ಯಾವುದೇ ಮಹತ್ತರ ವಿಚಾರಗಳು ಪ್ರಸ್ತಾಪವಾಗಲಿಲ್ಲ.ಸಭೆಯಲ್ಲಿ ಸಾರ್ವಜನಿಕರು ಯಾವುದೇ ಅಹವಾಲುಗಳನ್ನು ತೋಡಿಕೊಳ್ಳಲಿಲ್ಲ. ಇದು ಕೆಲಕಾಲ ಶಾಸಕರಿಗೂ ಇರುಸುಮುರುಸು ತರಿಸಿತು. ಬಳಿಕ ಸಭೆ ಉದ್ದೇಶಿಸಿ ಮಾತನಾಡಿ ಅಲ್ಲಿಂದ ಶಾಸಕರು ನಿರ್ಗಮಿಸಿದರು.
ಮಾಹಿತಿ ಕೊರತೆ! ಕುಂದುಕೊರತೆ ಸಭೆ ಆಯೋಜಿಸಿರುವ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ವಾರದ ಮುನ್ನವೇ ಎಲ್ಲ ಕಡೆಗಳಲ್ಲಿ ಸಭೆ ಅಯೋಜಿಸುವ ಬಗ್ಗೆ ಪ್ರಚಾರ ಮಾಡಬೇಕಿತ್ತು. ಆದರೆ ಕಾಟಾಚಾರಕ್ಕೆ ಎಂಬಂತೆ ಸಭೆ ನಡೆಸಿದ್ದರಿಂದ ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲ. ಅಧಿಕಾರಿಗಳಿಗೂ ಕಡೆ ಗಳಿಗೆಯಲ್ಲಿ ಮಾಹಿತಿ ನೀಡಿದ್ದರಿಂದ ಬಹಳಷ್ಟು ಅಧಿಕಾರಿಗಳು ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರತಿ ಶುಕ್ರವಾರ ಸಭೆ: ನಗರದಲ್ಲಿನ ಸ್ವಚ್ಛತೆ ಹಾಗೂ ಮೂಲ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದೇನೆ. ಯಾವ ಯಾವ ವಾರ್ಡ್‌ಗಳಲ್ಲಿ ಮೂಲ ಸಮಸ್ಯೆಗಳಿವೆ ಆದ್ಯತೆ ನೀಡಿ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಈ ವೇಳೆ ಶಾಸಕ ವೆಂಕಟರಮಣಯ್ಯ ತಿಳಿಸಿದರು. ನಗರಸಭೆ ಅಧಿಕಾರಿಗಳು ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸಬಾರದು, ಕಚೇರಿಯಲ್ಲೇ ಕುಳಿತು ಕೆಲಸ ಮಾಡುವುದನ್ನು ಬಿಟ್ಟು ನಗರ ವ್ಯಾಪ್ತಿಯಲ್ಲಿ ಸಂಚರಿಸಿ ಕೆಲಸ ಮಾಡಬೇಕೆಂದು ಹೇಳಿದರು. ಇನ್ನುಮುಂದೆ ಪ್ರತಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಸುತ್ತೇನೆ ಎಂದು ಹೇಳಿದರು.