ದೀದಿ ಬದುಕಿಗೆ ತಿರುವು ನೀಡಿದ ಡ್ರೋನ್

drone didi
ಡ್ರೋನ್‌ನೊಂದಿಗೆ ಕೃಷಿ ಜಮೀನಿನಲ್ಲಿ ಆಶಾರಾಣಿ.
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಕೇಂದ್ರ ಸರ್ಕಾರದ ಡ್ರೋನ್ ದೀದಿ ಶಿಕಾರಿಪುರ ತಾಲೂಕು ಚುರ್ಚುಗುಂಡಿಯ ಆಶಾರಾಣಿ ಬದುಕಿಗೆ ಹೊಸ ದಿಕ್ಕು ನೀಡಿದೆ. ಇವರ ಹೆಸರು ಹೇಳುವ ಬದಲಿಗೆ ಎಲ್ಲರೂ ಡ್ರೋನ್ ದೀದಿ ಎಂದೇ ಕರೆಯುತ್ತಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಯಶಸ್ವಿಯಾಗಿ ಡ್ರೋನ್ ಬಳಕೆ ಮಾಡಿದ ಆಶಾರಾಣಿ ಮುಂಗಾರು ಹಂಗಾಮಿನ ಮೇಲೆ ಆಶಾಭಾವನೆ ಹೊಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನನ್ನ ಹೆಸರನ್ನು ಡ್ರೋನ್ ದೀದಿ ಯೋಜನೆಗೆ ಆಯ್ಕೆ ಮಾಡಿದಾಗ ಕೊಂಚ ಅಳುಕಿತ್ತು. ಮೈಸೂರಿನಲ್ಲಿ 16 ದಿನ ತರಬೇತಿ ಪಡೆಯುವ ವೇಳೆಗೆ ಆತ್ಮವಿಶ್ವಾಸ ಮೂಡಿತು. ಬಳಿಕ ಇಫ್ಕೋ ಕಂಪನಿಯವರು ಭತ್ತದ ಗದ್ದೆಗಳಲ್ಲಿ ಪ್ರಾಯೋಗಿಕವಾಗಿ ನನ್ನನ್ನು ತೊಡಗಿಸಿದಾಗ ಡ್ರೋನ್ ಬಳಕೆ ಸಲೀಸಾಯಿತು ಎಂದು ಡ್ರೋನ್ ದೀದಿಯಾದ ಕತೆಯನ್ನು ಆಶಾರಾಣಿ ವಿವರಿಸುತ್ತಾರೆ.
ಕೃಷಿಯಲ್ಲಿನ ಖರ್ಚು ಕಡಿಮೆ ಮಾಡಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ. ಅದೇ ಸಮಯದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯೊಂದಿಗೆ ಜಾರಿಗೆ ಬಂದ ಡ್ರೋನ್ ದೀದಿ ಯೋಜನೆ ಅದೆಷ್ಟೋ ಮಂದಿಯ ಬಾಳಲ್ಲಿ ಮಂದಹಾಸ ಮೂಡಿಸಿದೆ. ಆ ಪೈಕಿ ಆಶಾರಾಣಿ ಕೂಡ ಒಬ್ಬರು.
ಇವರ ಕೈಗೆ ಡ್ರೋನ್ ಡ್ರೋನ್ ಸಿಕ್ಕಿದ್ದು ಏಪ್ರಿಲ್ ವೇಳೆಗೆ ಹೀಗಾಗಿ ಇದನ್ನು ಹೆಚ್ಚು ಬಳಕೆ ಮಾಡಲು ಸಾಧ್ಯವಾಗಲಿಲ್ಲ. ತರಬೇತಿ ವೇಳೆ 25 ಎಕರೆ ಹಾಗೂ ಬಳಿಕ 25 ಎಕರೆ ಭತ್ತ, ಮೆಕ್ಕೆಜೋಳ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡಲು ಡ್ರೋನ್ ಬಳಸಿಕೊಂಡಿದ್ದರು. ಆಶಾರಾಣಿ ತಮ್ಮ ಬಳಿಯಿರುವ ಡ್ರೋನ್‌ನ್ನು ಜಿಲ್ಲೆಯ ಯಾವುದೇ ಭಾಗ ಮಾತ್ರವಲ್ಲದೆ ಹೊರ ಜಿಲ್ಲೆಗೂ ಕೊಂಡೊಯ್ದು ಬಳಕೆ ಮಾಡಬಹುದು. ಈಗಾಗಲೇ ಡ್ರೋನ್ ಬಳಕೆ ಬಗ್ಗೆ ಕೃಷಿ ಇಲಾಖೆಯೂ ವ್ಯಾಪಕ ಪ್ರಚಾರ ನೀಡುತ್ತಿದೆ. ಈಗ ಮುಂಗಾರು ಹಂಗಾಮು ಶುರುವಾಗಿರುವುದರಿಂದ ಹೆಚ್ಚು ಬೇಡಿಕೆ ಬರಬಹುದೆಂಬುದು ಡ್ರೋನ್ ದೀದಿ ನಂಬಿಕೆ.
ಸ್ನಾತಕೋತ್ತರ ಪದವೀಧರೆ: ಜಿಲ್ಲೆಯ ಏಕೈಕ ಡ್ರೋನ್ ದೀದಿ ಸಿ.ಎಸ್.ಆಶಾರಾಣಿ ಮೂಲತಃ ಶಿಕಾರಿಪುರ ತಾಲೂಕು ಹಿರೇಕೊರ‌್ಲಹಳ್ಳಿಯವರು. ಕುವೆಂಪು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸುಮಾರು ಐದು ವರ್ಷಗಳ ಕಾಲ ಶಿಕಾರಿಪುರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ತಾಲೂಕಿನ ಚುರ್ಚುಗುಂಡಿಯ ರೈತ ಉಮೇಶ್ ಅವರನ್ನು ವಿವಾಹವಾಗಿ ಕೃಷಿಯಲ್ಲೂ ಸೈ ಎನಿಸಿಕೊಂಡರು. ಉಮೇಶ್ ಹಾಗೂ ಆಶಾರಾಣಿ ದಂಪತಿ ಎರಡು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಕುರಿ ಹಾಗೂ ಕೋಳಿ ಫಾರ್ಮ್, ಜೇನು ಕೃಷಿ, ತರಕಾರಿ ಬೆಳೆಯಲ್ಲಿ ಸಾಧನೆ ಮಾಡಿ ಕೃಷಿ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇದೇ ಕಾರಣದಿಂದ ಆಶಾರಾಣಿ ಡ್ರೋನ್ ದೀದಿ ಯೋಜನೆಗೆ ಆಯ್ಕೆಯಾದರು.
ಹೀಗಿದೆ ಡ್ರೋನ್:ಆಶಾರಾಣಿ ಅವರಿಗೆ ಇಫ್ಕೋ ಕಂಪನಿ ಒದಗಿಸಿರುವ ಡ್ರೋನ್ ತೂಕ 27 ಕೆಜಿ. ಈ ಡ್ರೋನ್‌ನಲ್ಲಿ ಒಮ್ಮೆಗೆ 10 ಲೀಟರ್ ಕೀಟನಾಶಕ, ಇಲ್ಲವೇ ನ್ಯಾನೋ ಗೊಬ್ಬರ ತುಂಬಬಹುದು. ನಾಲ್ಕು ಸೆಟ್ ಬ್ಯಾಟರಿಗಳಿವೆ. ಬ್ಯಾಟರಿ ಒಮ್ಮೆ ಚಾರ್ಜ್ ಆಗಲು 20 ನಿಮಿಷ ಬೇಕು. ಒಂದು ಬ್ಯಾಟರಿ ಮೂಲಕ ಮ್ಯಾನ್ಯುಯೆಲ್ ಮೋಡ್‌ನಲ್ಲಿ 10 ಲೀಟರ್ ಕೀಟನಾಶಕ ಇಲ್ಲವೇ ನ್ಯಾನೋ ಗೊಬ್ಬರವನ್ನು ಸಿಂಪರಣೆ ಮಾಡಬಹುದು. 10 ಲೀಟರ್ ಒಂದು ಎಕರೆ ಕೃಷಿ ಭೂಮಿಗೆ ಸಾಕಾಗುತ್ತದೆ. ಡ್ರೋನ್ ಅನ್ನು ಆಟೋ ಮೋಡ್‌ನಲ್ಲಿಟ್ಟರೆ ಒಂದೇ ಬ್ಯಾಟರಿಯಲ್ಲಿ 2.50 ಎಕರೆಗೆ ಸಿಂಪರಣೆ ಮಾಡಬಹುದು. ಸ್ಥಳದಲ್ಲೇ ಬ್ಯಾಟರಿ ಚಾರ್ಜ್ ಮಾಡಲು ಇವರಿಗೆ ಸಣ್ಣದೊಂದು ಜನರೇಟರ್ ಕೂಡ ನೀಡಲಾಗಿದೆ. ಇದೆಲ್ಲವನ್ನೂ ಕೊಂಡೊಯ್ಯಲು ಎಲೆಕ್ಟ್ರಿಕ್ ಆಟೋ ಕೂಡ ಒದಗಿಸಲಾಗಿದೆ. ಇದೆಲ್ಲವೂ ಕೇಂದ್ರ ಸರ್ಕಾರ ಇವರಿಗೆ ಉಚಿತವಾಗಿ ನೀಡಿದೆ.
ಕಡಿಮೆ ಖರ್ಚು:ಒಂದು ಎಕರೆ ಜಮೀನಿಗೆ ಸಿಂಪರಣೆ ಮಾಡಲು 5-6 ನಿಮಿಷ ಸಾಕಾಗುತ್ತದೆ. ಎಕರೆಗೆ ಆಶಾರಾಣಿ 400 ರೂ. ನಿಗದಿಪಡಿಸಿದ್ದಾರೆ. ಇದರಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಬಹುದು. ಆರ್ಥಿಕವಾಗಿಯೂ ಇದು ಸಹಕಾರಿ. ಒಂದು ವೇಳೆ ಸಣ್ಣ ಹಿಡುವಳಿದಾರರಿದ್ದರೆ ಐದಾರು ಮಂದಿ ಒಂದೇ ಬಾರಿ ಕೀಟನಾಶಕ ಇಲ್ಲವೇ ನ್ಯಾನೋ ಗೊಬ್ಬರ ಸಿಂಪರಣೆಗೆ ಮುಂದಾಗಬಹುದು.
ಪತಿಯ ಸಹಕಾರ:ಈಗ ಡ್ರೋನ್ ದೀದಿ ಆಶಾರಾಣಿಗೆ ಪತಿ ಉಮೇಶ್ ಬೆಂಬಲವೂ ಸಿಕ್ಕಿದೆ. ಉಮೇಶ್ ಸ್ವತಃ ಆಟೋ ಚಾಲನೆ ಮಾಡಿ ಡ್ರೋನ್ ಮತ್ತಿತರ ಸಾಮಗ್ರಿಗಳನ್ನು ರೈತರ ಕೃಷಿ ಜಮೀನಿನ ಬಳಿ ಕೊಂಡೊಯ್ಯುತ್ತಾರೆ. ಪತ್ನಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ. ಡ್ರೋನ್ ಸೇವೆ ಅಗತ್ಯವಿರುವವರು (ಮೊ. 6361400571) ಸಂಪರ್ಕಿಸಿದರೆ ನಾವು ತ್ವರಿತವಾಗಿ ಸ್ಪಂದಿಸುತ್ತೇವೆ ಎನ್ನುತ್ತಾರೆ ಆಶಾರಾಣಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net