

ಬೆಂಗಳೂರು: ರಸ್ತೆ ಬದಿ ನಿಲುಗಡೆ ಮಾಡಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಈಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದರ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಹರಪ್ಪನಹಳ್ಳಿ ಮೂಲದ ಸಂತೋಷ್ ನಾಯ್ಕ(೨೭) ಮೃತ ಚಾಲಕ. ಕನಕಪುರ ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ನೈಸ್ ರಸ್ತೆಯಲ್ಲಿ ತೆರಳುವಾಗ ನಾಗೇಗೌಡನಪಾಳ್ಯದ ಬಳಿ ಬುಧವಾರ ಮುಂಜಾನೆ ಸುಮಾರು ೧.೪೫ಕ್ಕೆ ಈ ಅಪಘಾತ ನಡೆದಿದೆ.
ಚಾಲಕ ಸಂತೋಷ್ ನಾಯ್ಕ ಈಚರ್ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗುವಾಗ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಪಾರ್ಕಿಂಗ್ ಲೈಟ್ ಹಾಕಿ ನಿಲುಗಡೆ ಮಾಡಿದ್ದ ಸರಕು ಸಾಗಣೆ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಚಾಲಕ ಸಂತೋಷ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.