

ಮೈಸೂರು; ‘ಭಾರತ ಸಮೃದ್ಧಶಾಲಿ, ಶಕ್ತಿಶಾಲಿ ರಾಷ್ಟ್ರ ಆಗಬೇಕು’ ಎಂಬ ಸ್ವಾಮಿ ವಿವೇಕಾನಂದರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ನಗರದಲ್ಲಿ ಆಯೋಜಿಸಿರುವ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 9ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿಶ್ವವ್ಯಾಪಿಯಾಗುತ್ತಿದೆ. ಭಾರತ ದೇಶವೂ ಬಲಿಷ್ಠವಾಗಿ ಜಾಗತಿಕ ಮಟ್ಟದಲ್ಲಿ ಪ್ರಖರವಾಗಿ ಬೆಳೆಯುತ್ತಿದೆ. ಇದಕ್ಕೆ ಮೋದಿ ಕಾರಣ. ಕಳೆದ 9 ವರ್ಷದಿಂದ ಪ್ರಧಾನಿಯಾಗಿರುವ ಅವರು, ಸ್ವಂತಕ್ಕಾಗಿ ಆಲೋಚನೆ ಮಾಡಲಿಲ್ಲ. ದೇಶ ಕುರಿತು ಚಿಂತನೆ ನಡೆಸಿದ್ದಾರೆ. ವಿಶ್ರಾಂತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಫಲವಾಗಿ ಭಾರತ ಸಮೃದ್ಧಶಾಲಿ, ಶಕ್ತಿಶಾಲಿ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿದರು.
ಮೋದಿ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಇದಕ್ಕೆ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರೇ ಪ್ರೇರಣೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಆಶೀರ್ವಾದ, ಮಾರ್ಗದರ್ಶನ ಪಡೆದುಕೊಂಡೆ. ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ನನ್ನ ಬಗ್ಗೆ ಮೆಚ್ಚುಗೆ ಮಾತನಾಡಿದ ಪ್ರಧಾನಿ, ‘ನೀನು ಬೇರೆಯವರ ಬಗ್ಗೆ ಕೆಟ್ಟದ್ದನ್ನು ಮಾತನಾಡದೆ ಇತಿಮಿತಿಯಲ್ಲೇ ಮಾತನಾಡುವ ವ್ಯಕ್ತಿ. ಇದನ್ನೇ ಮುಂದುವರಿಸಿಕೊಂಡು ಹೋಗು’ ಎಂದು ಸಲಹೆ ಕೊಟ್ಟಿದ್ದಾರೆ. ಇದುವೇ ನನಗೆ ದೊಡ್ಡ ಸ್ಫೂರ್ತಿ ಎಂದರು.
ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಸ್ಮಾರಕ ಕೇವಲ ಮಂಟಪವಲ್ಲ. ಅದು ಯುವಪೀಳಿಗೆಗೆ ದಾರಿದೀಪ. ಈ ಸ್ಮಾರಕ ಸಾಕಾರಗೊಳ್ಳಲು ಪ್ರತಿಯೊಬ್ಬರೂ ತನು-ಮನ-ಧನ ಸಹಾಯ ಮಾಡಬೇಕು ಎಂದು ವಿಜಯೇಂದ್ರ ಹೇಳಿದರು.
ದೇಶದಲ್ಲಿ ಗುರು-ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸವಿದೆ. ರಾಮಕೃಷ್ಣ ಪರಮಹಂಸರು-ಸ್ವಾಮಿ ವಿವೇಕಾನಂದರು ಈ ಪರಂಪರೆಗೆ ದಿವ್ಯಚೇತನರಾಗಿದ್ದಾರೆ ಎಂದರು.
ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್, ಹಲಸೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪನಂದಜೀ ಮಹಾರಾಜ್, ಶಾಸಕ ಟಿ.ಎಸ್.ಶ್ರೀವತ್ಸ, ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್.ಎನ್.ಮುರಳೀಧರ ಇದ್ದರು.
ಬಿ.ವೈ.ವಿಜಯೇಂದ್ರ ಅವರನ್ನು ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಿ ನಾವುಗಳೆಲ್ಲ ನೋಡುತ್ತೇವೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಮಹಾರಾಜ್ ಹೇಳಿದರು.
ವಿಜಯೇಂದ್ರ ಭರವಸೆಯ ನಾಯಕ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮೂಲಕ ಮುಂಚೂಣಿ ಕಮಾಂಡರ್ ಆಗಿ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ದೊಡ್ಡ ಜವಾಬ್ದಾರಿ ದೊರೆಯಲಿವೆ ಎಂದು ನುಡಿದರು.
ನಿರ್ಮಾಣ ಹಂತದ ವಿವೇಕ ಸ್ಮಾರಕ ಮೈಸೂರಿನ ಹೆಮ್ಮ್ಮೆಯಷ್ಟೇ ಅಲ್ಲ, ಅದು ಭಾರತದ ಹೆಮ್ಮ. ಸ್ವಾಮಿ ವಿವೇಕಾನಂದರ ಚರಿತ್ರೆ ದೊಡ್ಡ ದಾಖಲೆಯಾಗಿ ಇಲ್ಲಿ ರೂಪಗೊಳ್ಳಲಿದೆ. ಹೀಗಾಗಿ, ಇದು ರಾಜ್ಯ ಯೋಜನೆಯಾಗಿ ವಿಸ್ತಾರವಾಗಲಿದೆ. ಅದಕ್ಕೆ ಪ್ರತಿಯೊಬ್ಬರು ನೆರವು-ಸಹಕಾರ ನೀಡಬೇಕು ಎಂದು ತಿಳಿಸಿದರು.