ಚಿಗುರಿತು ಬಡವರ ಸ್ವಂತ ಮನೆ ಕನಸು

BYD MANE KANASU
Published on

ಬ್ಯಾಡಗಿ: ಇಲ್ಲಿಯ ಪುರಸಭೆಯು ಸರ್ಕಾರಿ ನಿವೇಶನ ಹಂಚಿಕೆಗೆ ಮುಂದಾಗಿರುವುದು ನಿರಾಶ್ರಿತರಲ್ಲಿ ಹೊಸ ಭರವಸೆ ಮೂಡಿಸಿದೆ. ಆಶ್ರಯ ಸಮಿತಿ ಅಧ್ಯಕ್ಷ, ಸದಸ್ಯರ ನೇಮಕ ಹಾಗೂ ನೂತನ ಕಚೇರಿ ಉದ್ಘಾಟನೆ ಬಳಿಕ ಅರ್ಹ ಫಲಾನುಭವಿಗಳಿಗೆ 2025ರ ಮಾರ್ಚ್​ನಲ್ಲಿ ನಿವೇಶನ ಹಕ್ಕುಪತ್ರ ನೀಡಲು ತಯಾರಿ ನಡೆದಿದೆ.

2012ರಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ಅವಧಿಯಲ್ಲಿ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ 800ಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ಬಳಿಕ ಬಡಕುಟುಂಬಗಳು ಈವರೆಗೂ ಅರ್ಜಿ ಸಲ್ಲಿಕೆಯಾಗುತ್ತ ಬಂದಿವೆ. 2017ರಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಲ್ಲೂರು ರಸ್ತೆಯಲ್ಲಿ 10.14 ಎಕರೆ ಭೂಮಿ ಖರೀದಿಸಿ, ಜಿ ಪ್ಲಸ್ ಮಾದರಿಯ ಮನೆ ನಿರ್ವಿುಸುವ ಉದ್ದೇಶದಿಂದ 814 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.

ಬಳಿಕ ಜರುಗಿದ ಚುನಾವಣೆಯಲ್ಲಿ (2018ರಲ್ಲಿ) ವಿರೂಪಾಕ್ಷಪ್ಪ ಬಳ್ಳಾರಿ ಅವರು ಶಾಸಕರಾಗಿ ಆಯ್ಕೆಯಾದರು. ಹಿಂದಿನ ಆಯ್ಕೆಪಟ್ಟಿಯನ್ನು ಆಶ್ರಯ ಸಮಿತಿ ಪರಿಶೀಲಿಸಿ 615 ಫಲಾನುಭವಿಗಳನ್ನು ಗುರುತಿಸಿತು. ಈ ಪೈಕಿ 500 ಮನೆಗಳಿಗೆ ಹಕ್ಕುಪತ್ರ ನೀಡಲು ಸಮಿತಿ ನಿರ್ಣಯಿಸಿ, ಮೊದಲ ಹಂತದಲ್ಲಿ 419 ಮನೆಗಳನ್ನು 10 ಎಕರೆ ಜಾಗದಲ್ಲಿ ನೀಡಬೇಕು. ಇನ್ನುಳಿದ 82 ಫಲಾನುಭವಿಗಳಿಗೆ ಆಶ್ರಯ ಬಡಾವಣೆಯ ಖಾಲಿ ನಿವೇಶನದಲ್ಲಿನ ಜಾಗ ಗುರುತಿಸಿ ಹಕ್ಕುಪತ್ರ ನೀಡಬೇಕು ಎಂದು ತೀರ್ವನಿಸಿತ್ತು. ಆಗ 277 ಹಕ್ಕು ಪತ್ರಗಳು ವಸತಿ ಸಚಿವರ ಸಹಿಯೊಂದಿಗೆ ಸಿದ್ಧವ ಾಗಿದ್ದವು. ಪುರಸಭೆ ಕೆಲ ಸದಸ್ಯರ ಅಸಹಕಾರದಿಂದ ಅವಕಾಶ ತಪ್ಪಿತು. ಈ ಗೊಂದಲ ಹಾಲಿ ಶಾಸಕರಿಗೆ ದೊಡ್ಡ ಸವಾಲಾಗಿ ಪರಿಣಿಮಿಸಿದ್ದು, ಹಳೆಯ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಬೇಕೆ, ಬೇಡವೆ ಎನ್ನುವ ಚರ್ಚೆ ನಡೆದಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದು, ಬಡ ಕುಟುಂಬಗಳಿಗೆ ನಿವೇಶನ ನೀಡುವ ದೊಡ್ಡ ಜವಾಬ್ದಾರಿ ಸಮಿತಿ ಮೇಲಿದೆ.

20 ಎಕರೆ ಖರೀದಿಗೆ ಪ್ರಸ್ತಾವನೆ:

ನಿವೇಶನ ಇಲ್ಲದ ನಿರಾಶ್ರಿತರ ಅರ್ಜಿಗಳು 12 ವರ್ಷಗಳಲ್ಲಿ ದ್ವಿಗುಣವಾಗಿವೆ. ಎಲ್ಲರಿಗೂ ನ್ಯಾಯ ಒದಗಿಸಲು ಈಗಿರುವ 10 ಎಕರೆ ಸಾಕಾಗುವುದಿಲ್ಲ. ಹೀಗಾಗಿ ಸ್ಥಳೀಯ ಶಾಸಕರು ಹೊಸದಾಗಿ 20 ಎಕರೆ ಜಾಗ ಖರೀದಿಗೆ ಸರ್ಕಾರದ ಮೊರೆ ಹೋಗಿದ್ದು, ಪ್ರಸ್ತಾವನೆ ಕೂಡ ಸಿದ್ಧಪಡಿಸಿದ್ದಾರೆ.

ಬಡ್ಡಿಸಮೇತ ಹಣ ವಾಪಸ್:

2022ರಲ್ಲಿ ನಿವೇಶನ ಪಡೆಯಲು ಕೆಲವರು ಪುರಸಭೆ ಖಾತೆಗೆ 30 ಸಾವಿರ ರೂ. ಪಾವತಿಸಿದ್ದಾರೆ. ರಾಜ್ಯ ವಸತಿ ನಿಗಮ ಪಟ್ಟಿಯಲ್ಲಿ ಹಣ ತುಂಬಿದ ಎಲ್ಲರ ಹೆಸರುಗಳು ಅಂತಿಮಗೊಂಡಿಲ್ಲ. ಪಟ್ಟಣದಲ್ಲಿ ಮನೆ ಹಾಗೂ ನಿವೇಶನ ಹೊಂದಿರುವ ಕೆಲವರು ಹಣ ತುಂಬಿ ನಿವೇಶನಕ್ಕಾಗಿ ಪ್ರಭಾವ ಬೀರುತ್ತಿದ್ದಾರೆ. ಅರ್ಹ ಬಡವರಿಗೆ ಮೊದಲ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಈ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿ, ಬಳಿಕ ಅರ್ಹರನ್ನು ಆಯ್ಕೆ ಮಾಡಲು ಸಮಿತಿ ಕಾರ್ಯೋನ್ಮುಖವಾಗಿದೆ.

ನಿರಾಶ್ರಿತರಿಗೆ ನಿವೇಶನ ಹಂಚಲು ಶಾಸಕರು, ಆಶ್ರಯ ಸಮಿತಿ ಸದಸ್ಯರು ಕಾರ್ಯನಿರತರಾಗಿರುವುದು ಬ್ಯಾಡಗಿಯ ಬಡ ಕುಟುಂಬಗಳಿಗೆ ಸಂತಸ ತಂದಿದೆ. 10 ಎಕರೆಯೊಂದಿಗೆ ಇನ್ನೂ 20 ಎಕರೆ ಜಾಗ ಖರೀದಿಸುವ ಯೋಜನೆ ಬಡವರ ಪರ ಕಾಳಜಿಯಾಗಿದ್ದು, ಶೀಘ್ರ ಜಾರಿಯಾಗಲಿ. | ಮಲ್ಲೇಶಪ್ಪ ಚಿಕ್ಕಣ್ಣನವರ ಭ್ರಷ್ಟಾಚಾರ ನಿಮೂಲನೆ ಸಮಿತಿ ರಾಜ್ಯ ಸಂಚಾಲಕ ಹಿಂದಿನ ಎಲ್ಲ ಆಯ್ಕೆ ಪಟ್ಟಿಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಸಮಿತಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ, ಅಧಿಕಾರಿಗಳ ಸಹಕಾರ ಪಡೆಯುತ್ತೇವೆ. 2025ರ ಮಾರ್ಚ್ ನಲ್ಲಿ ಆಯ್ಕೆಪಟ್ಟಿ ಪ್ರಕಟಿಸಿ ನಿವೇಶನ ವಿತರಿಸಲಾಗುವುದು. | ಅಬ್ದುಲ್ ಮುನಾಫ್ ಎರೆಸೀಮೆ ಆಶ್ರಯ ಸಮಿತಿ ಅಧ್ಯಕ್ಷ ಬ್ಯಾಡಗಿ ಮತಕ್ಷೇತ್ರದ ಬಡವರ ನೋವು ಗೊತ್ತಿದೆ. ಹಿಂದಿನ ಅವಧಿಯಲ್ಲಿ 10 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಖರೀದಿಸಿ ಆಯ್ಕೆಪಟ್ಟಿ ಸಿದ್ಧಪಡಿಸಿದ್ದೆ. ಕಾರಣಾಂತರಗಳಿಂದ ನಿವೇಶನ ವಿತರಣೆ ವಿಳಂಬವಾಗಿದೆ. ಮರು ಪರಿಶೀಲಿಸಿ ಅರ್ಹ ನಿರಾಶ್ರಿತರಿಗೆ ನ್ಯಾಯ ಒದಗಿಸಲಾಗುವುದು. ಉಳಿದ ಬಡಕುಟುಂಬಗಳಿಗೂ ನಿವೇಶನ ನೀಡಲು ಹೊಸ ಭೂಮಿ ಖರೀದಿಗೆ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು. | ಬಸವರಾಜ ಶಿವಣ್ಣನವರ ಶಾಸಕ ನಿವೇಶನ ನೀಡುವಂತೆ ಪುರಸಭೆಗೆ ಅರ್ಜಿ ಸಲ್ಲಿಸಿ 10 ವರ್ಷ ಕಳೆದಿವೆ. ಈವರೆಗೂ ನನ್ನಂತಹ ಸಾವಿರಾರು ಬಡವರಿಗೆ ನ್ಯಾಯ ಸಿಕ್ಕಿಲ್ಲ. ಶಾಸಕರು ಹಾಗೂ ಆಶ್ರಯ ಸಮಿತಿ ಸದಸ್ಯರು ಹೊಸ ಭರವಸೆ ನೀಡಿದ್ದು, ಶೀಘ್ರ ನಿವೇಶನ ಹಂಚಿಕೆ ಮಾಡುವ ಸುದ್ದಿ ತಿಳಿದು ಸಂತಸವಾಗಿದೆ. | ಎಲ್.ವಿ. ಹಮ್ಮಗಿ ನಿವೇಶನದ ಅರ್ಜಿದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net