

ರಾಯಚೂರು: ಕಳೆದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಸಮಾಜದ ಜನರ ಒಳ ಮೀಸಲಾತಿಯ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಪ್ರಧಾನಿ ಮೋದಿ ನೀಡಿದ ಭರವಸೆ ಸುಳ್ಳಾಗುವುದಿಲ್ಲ ಎಂದು ವಿಜಯಪುರದ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಮಾದಿಗ ಮುನ್ನಡೆ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಒಳ ಮೀಸಲಾತಿಗೆ ಬೇಕಿರುವ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಜಾರಿಗೊಳಿಸಲಾಗುವುದು ಎಂದರು.
ಕಾಂಗ್ರೆಸ್ ನಾಯಕರು ಕೇವಲ ಒಳ ಮೀಸಲಾತಿ ಬಗ್ಗೆ ಮಾತನಾಡಿದರೆ ಹೊರತು ಅದನ್ನು ಕಾರ್ಯಗತಗೊಳಿಸಲು ಮುಂದಾಗಲಿಲ್ಲ. ಸದಾಶಿವ ಆಯೋಗಕ್ಕೆ ಸಿಬ್ಬಂದಿ ಮತ್ತು ಅನುದಾನ ನೀಡದೆ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದರು. ಬಿಜೆಪಿ ಸರ್ಕಾರದ ಅವಯಲ್ಲಿ ಒಳ ಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಾರಸ್ಸು ಮಾಡಿದ್ದು, ಶೀಘ್ರದಲ್ಲಿ ಅದು ಜಾರಿಯಾಗಲಿದೆ ಎಂದು ಹೇಳಿದರು.
ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ ಮಾತನಾಡಿ, 2004ರಲ್ಲಿ ಸಿಎಂ ಆಗಿದ್ದ ಧರ್ಮಸಿಂಗ್ ಸದಾಶಿವ ಆಯೋಗವನ್ನು ರಚನೆ ಮಾಡಿದ್ದರು. ನಾಲ್ಕು ವರ್ಷ ಸಿಬ್ಬಂದಿ, ಅನುದಾನ ನೀಡಲಿಲ್ಲ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಆಯೋಗಕ್ಕೆ 11 ಕೋಟಿ ರೂ. ನೀಡಿದ್ದರಿಂದ ಆಯೋಗ ಅಧ್ಯಯನ ನಡೆಸಿ 2012ರಲ್ಲಿ ವರದಿ ನೀಡಿತ್ತು.
2013ಕ್ಕೆ ಅಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಕಾಲ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಿಲ್ಲ. ಜತೆಗೆ ವರದಿಯೇ ಅವೈಜ್ಞಾನಿಕ ಎನ್ನುವ ಹೇಳಿಕೆಯನ್ನು ನೀಡಿದ್ದರು. ಈಗ ಪುನಃ ಸದಾಶಿವ ಆಯೋಗದ ವರದಿಯ ಜಪ ಮಾಡುತ್ತಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯಲ್ಲಿ ಕೇವಲ ಶೇ.15ರಷ್ಟು ಮೀಸಲಾತಿ ಪ್ರಸ್ತಾಪ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ಶೇ.17ರಷ್ಟು ಮೀಸಲಾತಿಯನ್ನು ವರ್ಗೀಕರಣ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಿದೆ. ಶೀಘ್ರದಲ್ಲಿ ಜಾರಿಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಕಾಂಗ್ರೆಸ್‌ನವರಿಗೆ ಒಳ ಮೀಸಲಾತಿ ಜಾರಿ ಮಾಡುವ ಉದ್ದೇಶವಿಲ್ಲ. ನಮ್ಮಲ್ಲಿ ಒಡಕು ಉಂಟು ಮಾಡುವ ಹುನ್ನಾರವನ್ನು ಮಾಡುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯಲ್ಲಿ ಒಡಕು ಉಂಟಾಗಲು ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆ.
ಹಲವಾರು ವರ್ಷಗಳ ಕಾಲ ಸದಾಶಿವ ಆಯೋಗದ ವರದಿಯನ್ನು ಧೂಳು ತಿನ್ನುವಂತೆ ಮಾಡಿದ್ದು ಕಾಂಗ್ರೆಸ್ ನಾಯಕರು. ಹೈದರಾಬಾದ್‌ನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮಿಸಿ ಒಳ ಮೀಸಲಾತಿ ಜಾರಿಯ ಭರವಸೆ ನೀಡಿದ್ದರಿಂದ ಹೋರಾಟಕ್ಕೆ ಮುನ್ನಡೆ ದೊರೆತಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ದಲಿತ ಮುಖಂಡರುಗಳಾದ ಸಿ.ಎಸ್.ಪಾರ್ಥಸಾರಥಿ, ಮಹಾಲಕ್ಷ್ಮಿ, ರಾಮಣ್ಣ ಬುಳ್ಳಾಹುಣಸಿ, ಪೂಜಪ್ಪ, ಬಿ.ನರಸಪ್ಪ, ಡಿ.ಒ.ಮೊರಾರ್ಜಿ, ರವೀಂದ್ರ ಜಲ್ದಾರ್ ಉಪಸ್ಥಿತರಿದ್ದರು.