

ಯಳಂದೂರು: ಕರ್ನಾಟಕ ರಾಜ್ಯವು ಇಂದು ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಜ್ಯ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಕಾಣುತ್ತಿದೆ. ಇದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಒದಗಿಸುವತ್ತ ದಾಪುಗೋಲು ಇಡುತ್ತಿದೆ, ಸ್ವಾತಂತ್ರೃ ಭಾರತ ಕಂಡಿದ್ದ ಕನಸನ್ನು ನನಸು ಮಾಡುವತ್ತ ರಾಜ್ಯದಿಟ್ಟ ಹೆಜ್ಜೆ ಇಟ್ಟಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 78ನೇ ವರ್ಷದ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳ ಮೂಲಕ ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರೃ ನಂತರ ಭಾರತ ಯಾವ ದಿಕ್ಕಿಗೆ ಸಾಗಬೇಕು ಎಂಬುದಕ್ಕೆ ಸೂಕ್ತ ಹಾದಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಕಿಕೊಟ್ಟಿದ್ದಾರೆ ಎಂದರು.
ತಹಸೀಲ್ದಾರ್ ಜಯಪ್ರಕಾಶ್ ಧ್ವಜಾರೋಹಣ ನಡೆಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳ ನೃತ್ಯ, ಪೊಲೀಸ್ ಇಲಾಖೆ ಮತ್ತು ಶಾಲಾ ಮಕ್ಕಳು ನಡೆಸಿಕೊಟ್ಟ ಪರೇಡ್ ಗಮನ ಸೆಳೆಯಿತು. ಪಪಂ ಸದಸ್ಯರಾದ ಬಿ.ಲಕ್ಷ್ಮೀ ಮಲ್ಲು, ಸುಶೀಲಾ ಪ್ರಕಾಶ್ ಬಿಇಒ ಕೆ.ಕಾಂತರಾಜು, ಪಿಎಸ್‌ಐ ಹನುಮಂತ ಉಪ್ಪಾರ್, ಸರ್ಕಾರಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ, ರಾಜಸ್ವ ನಿರೀಕ್ಷಕ ಯದುಗಿರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ಶಾಲಾ ಕಾಲೇಜು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಿವಿಧೆಡೆ ಆಚರಣೆ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳು, ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಪಟ್ಟಣದ ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ವಿದ್ಯಾರ್ಥಿನಿಲಯಗಳು ಸೇರಿದಂತೆ ವಿವಿಧೆಡೆ ಗುರುವಾರ 78ನೇ ವರ್ಷದ ಸ್ವಾತಂತ್ರೃ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಯಿತು. ಶಾಲಾ-ಮಕ್ಕಳು ತ್ರಿವರ್ಣ ಧ್ವಜದ ಧಿರಿಸು ಧರಿಸಿ ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು. ತಮ್ಮ ಮುಖಕ್ಕೆ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿದು ಸಂಭ್ರಮಿಸಿದರು.