ಹೆದ್ದಾರಿ ಅಭಿವೃದ್ಧಿ ಯಿಂದ ದಶಕದ ಕನಸು ನನಸು

g h shrinivas (1)
Published on

ತರೀಕೆರೆ: ದಶಕಗಳ ಪ್ರಯತ್ನದಿಂದ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಾಕಾರಗೊಳುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೊಣೆ ಕೇಂದ್ರ ಸರ್ಕಾರದ್ದಾಗಿತ್ತಾದರೂ, ರಾಜ್ಯ ಸರ್ಕಾರವೇ ಅಗತ್ಯ ಅನುದಾನ ನೀಡಿ ರಸ್ತೆ ಅಭಿವೃದ್ಧಿಗೆ ಹಸಿರು ನಿಶಾನೆ ತೋರಿದೆ. ಎಸ್‌ಎಚ್‌ಡಿಪಿ, ಅಪೆಂಡಿಕ್ಸ್, ಡಲ್ಟ್, ಸಿಎಂ ವಿಶೇಷ ಅನುದಾನ ಸೇರಿ ವಿವಿಧ ಯೋಜನೆ ಮೂಲಕ ಅಂದಾಜು 29.35 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಪಟ್ಟಣದ ಕೋಡಿ ಕ್ಯಾಂಪ್‌ನಿಂದ ತಾಲೂಕು ಕಚೇರಿವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, 29.35 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆ ಡಿವೈಡರ್, ಪುಟ್‌ಪಾತ್, ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. ಅಲ್ಲದೇ ರಸ್ತೆಯ ಎರಡೂ ಬದಿಯಲ್ಲಿ ಯುಜಿಡಿ, 30 ಮೀಟರ್‌ಗೆ ಒಂದರಂತೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ದೇಶದಲ್ಲಿ ಪ್ರಥಮವಾಗಿ ಜಾತಿ ಜನಗಣತಿ ಕಾರ್ಯ ಕೈಗೊಳ್ಳುತ್ತಿದ್ದು, ಇದರಿಂದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಗೊತ್ತಾಗಲಿದೆ. ಈ ಉದ್ದೇಶ ಒಳ್ಳೆಯದಾಗಿದ್ದು, ಜಾತಿ ಜನಗಣತಿ ಜಾರಿಗೊಳ್ಳುವುದು ಬಹುತೇಕ ನಿಶ್ಚಿತ ಎಂದರು.ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಎಂ.ಗಿರಿಜಾ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಯಾನಂದ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಟಿ.ಎನ್.ಜಗದೀಶ್, ಇಇ ಶ್ರೀಧರ್, ಎಇಇ ಜಿ.ನಾಗೇಂದ್ರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net