

ಮೈಸೂರು: ದಸರಾ ಸಂಭ್ರಮ, ಜಂಬೂಸವಾರಿ ವೈಭವ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು... ಹೀಗೆ ಮೈಸೂರಿನ ದಸರಾ ಉತ್ಸವದ ಸೊಬಗು ಮತ್ತು ಸ್ವಚ್ಛತೆಯ ಮಹತ್ವವನ್ನು ಪುಟ್ಟ ಕಲಾವಿದರು ತಮ್ಮ ಕುಂಚದಲ್ಲಿ ಮನಮೋಹಕವಾಗಿ ಅರಳಿಸಿದರು. ಬಣ್ಣಬಣ್ಣದ ಚಿತ್ರಗಳ ಮೂಲಕ ಸ್ವಚ್ಛ ಮೈಸೂರಿನ ಕನಸನ್ನು ಸಾಕಾರಗೊಳಿಸುವ ಸಂದೇಶ ಸಾರಿದರು.
ದಸರಾ ಚಿತ್ರಸಂತೆ ಉಪ ಸಮಿತಿ ವತಿಯಿಂದ ಮಾನಸಗಂಗೋತ್ರಿಯಲ್ಲಿ ಆಯೋಜಿಸಿರುವ ಚಿತ್ರಸಂತೆಯ ಅಂಗವಾಗಿ ಶನಿವಾರ 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ದೃಶ್ಯ ಕಲಾವಿದರ ಸಂಘದ ಸಹಯೋಗದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ‘ನಮ್ಮ ಮೈಸೂರು ದಸರಾ, ಸ್ವಚ್ಛ ಮೈಸೂರು ದಸರಾ’ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬಿದರು. ಮಕ್ಕಳ ಬಣ್ಣದ ಲೋಕದಲ್ಲಿ ಮೂಡಿಬಂದ ಸ್ವಚ್ಛ ಮೈಸೂರಿನ ಕನಸು, ನಗರದ ಸೌಂದರ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಎಂಬುದನ್ನು ನೆನಪಿಸಿತು. ಕಲೆಯ ಮೂಲಕ ಪರಿಸರ ಕಾಳಜಿಯ ಬೀಜ ಬಿತ್ತಿದ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಯಿತು.
70 ವಿದ್ಯಾರ್ಥಿಗಳು ಪಾಲಕರೊಂದಿಗೆ ಆಗಮಿಸಿ ಅತ್ಯಂತ ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ವಚ್ಛತೆಯ ಮಹತ್ವವನ್ನು ಚಿತ್ರಗಳ ಮೂಲಕ ಅಭಿವ್ಯಕ್ತಪಡಿಸಿದರು. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ದೃಶ್ಯಗಳನ್ನು ಅನೇಕ ವಿದ್ಯಾರ್ಥಿಗಳು ಚಿತ್ರಿಸಿದರು. ಇನ್ನು ಕೆಲವರು ದಸರಾ ಉತ್ಸವದ ಸಂಭ್ರಮ ಹಾಗೂ ಸ್ವಚ್ಛತೆಯ ಅಗತ್ಯವನ್ನು ತಮ್ಮ ಕುಂಚದ ಮೂಲಕ ಅರಳಿಸಿದರು. ಮಕ್ಕಳ ಕಲ್ಪನೆಯಲ್ಲಿ ಮೂಡಿಬಂದ ಸ್ವಚ್ಛ ಮೈಸೂರಿನ ಸುಂದರ ಚಿತ್ರಗಳನ್ನು ಕಂಡ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಸೃಜನಶೀಲತೆಗೆ ವೇದಿಕೆ ಒದಗಿಸುವುದರ ಜತೆಗೆ ಸ್ವಚ್ಛತೆಯ ಜಾಗೃತಿ ಮೂಡಿಸಿದ ಸ್ಪರ್ಧೆ ಗಮನ ಸೆಳೆಯಿತು.
ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನ ಪ್ರಾಂಶುಪಾಲ ಮಹದೇವಶೆಟ್ಟಿ, ದೃಶ್ಯ ಕಲಾವಿದರ ಸಂಘದ ಅಧ್ಯಕ್ಷ ಬಾಲಸ್ವಾಮಿ ಹಾಗೂ ಕಾರ್ಯದರ್ಶಿ ಎಸ್.ಜೆ. ಗಣೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಬಹುಮಾನ ವಿಜೇತರು
ನಗರದ ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿನಿ ಎಚ್.ಪಿ. ಪಾವನಿ ಪ್ರಥಮ, ವಿಜಯ ವಿಠ್ಠಲ ಪದವಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಡಿ. ಮೋಹಿತ್ ಆರ್ಯ ದ್ವಿತೀಯ ಹಾಗೂ ಎಸ್‌ಜೆಸಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎಸ್. ಕ್ಷಿತಿ ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಬೈಸಿಕಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಉಪಸ್ಥಿತರಿದ್ದರು.
ಸ್ವಚ್ಛತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ
ಮೈಸೂರು ಸ್ವಚ್ಛವಾಗಿರಲು ಪ್ರತಿಯೊಂದು ಮನೆಯಲ್ಲೂ ತ್ಯಾಜ್ಯವನ್ನು ವಿಂಗಡಿಸಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳು ಹಾಗೂ ಪಾಲಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಚಿತ್ರಸಂತೆ ಉಪ ಸಮಿತಿ ಅಧ್ಯಕ್ಷೆ ಹಾಗೂ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಹೇಳಿದರು.
ಇಂದಿನ ಯುವಪೀಳಿಗೆ ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ದೈನಂದಿನ ಪ್ರಯಾಣಕ್ಕೆ ಬೈಸಿಕಲ್ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ವಾಯುಮಾಲಿನ್ಯ ತಗ್ಗಿಸಲು ಮತ್ತು ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಜನಮನ ಸೆಳೆದ ಚಿತ್ರಸಂತೆ
ಮಾನಸಗಂಗೋತ್ರಿಯಲ್ಲಿ ಆಯೋಜಿಸಿರುವ ಚಿತ್ರಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶನಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ವಿವಿಧ ಕಲಾವಿದರು ಪ್ರದರ್ಶಿಸಿದ ಚಿತ್ರಗಳನ್ನು ವೀಕ್ಷಿಸಿದರು. ಹಲವರು ಚಿತ್ರಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು. ಜನರ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಭಾನುವಾರಕ್ಕೂ ವಿಸ್ತರಿಸಲಾಗಿದೆ. ಕಲಾವಿದರ ಸೃಜನಶೀಲತೆ, ಮಕ್ಕಳ ಕಲ್ಪನೆ ಮತ್ತು ಸ್ವಚ್ಛತೆಯ ಸಂದೇಶ ಒಂದೇ ವೇದಿಕೆಯಲ್ಲಿ ಮೇಳೈಸಿದ್ದು, ದಸರಾ ಸಂಭ್ರಮಕ್ಕೆ ಕಲೆಯ ಮೆರುಗು ನೀಡಿದೆ.