ನಾಟಕಕಾರ ಸಂಸ ನಾಡಿನ ಹೆಮ್ಮೆ

13 yelandur 01
ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ನಾಟಕಕಾರ ಸಂಸ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮಹದೇವ ಶಂಕನಪುರ ಉದ್ಘಾಟಿಸಿದರು. ಮಲ್ಲೇಶ್, ಮುಬಾರಕ್ ಉನ್ನಿಸಾ, ಪುಷ್ಪವತಿ, ಗೋಪಾಲಕೃಷ್ಣ ಇತರರಿದ್ದರು.
Published on

ಯಳಂದೂರು : ತಾಲೂಕಿನ ಅಗರ ಗ್ರಾಮದಲ್ಲಿ ಜನಿಸಿ ಜಗತ್ತಿನ ಹಲವು ದೇಶಗಳನ್ನು ಸುತ್ತಿ 23 ನಾಟಕಗಳನ್ನು ಕನ್ನಡದಲ್ಲಿ ರಚಿಸಿ ನಾಡಿನಾದ್ಯಂತ ಖ್ಯಾತಿ ಪಡೆದ ಸಂಸ ನಾಡಿನ ಹೆಮ್ಮೆಯಾಗಿದ್ದು ಇವರ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವಾಗಬೇಕಿದೆ ಎಂದು ಉಪನ್ಯಾಸಕ ಮಹದೇವಪ್ರಭು ಸಲಹೆ ನೀಡಿದರು.

ತಾಲೂಕಿನ ಮಾಂಬಳ್ಳಿ ಗ್ರಾಮದ ಶ್ರೀಮತಿ ಕಮಲಮ್ಮ ಮತ್ತು ಶ್ರೀ ಕರಿಗೇಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಆಯೋಜಿಸಿದ್ದ ಸಂಸ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗರ ಗ್ರಾಮದಲ್ಲಿ ಜನಿಸಿದ ಸಂಸ ಅವರ ಮೂಲ ಹೆಸರು ಎ.ಎಂ. ಸ್ವಾಮಿ ವೆಂಕಟಾದ್ರಿ ಅಯ್ಯರ್ ಆಗಿತ್ತು. ಆದರೆ ತಮ್ಮ ಕಾವ್ಯನಾಮವಾದ ಕಂಸದ ಅಪಭ್ರಂಶ ಶಬ್ಧ ತಮ್ಮ ನಾಟಕದಲ್ಲಿ ತಪ್ಪಾಗಿ ಅಚ್ಚಾಗಿ ಸಂಸ ಎಂದಾಗಿ ಅಂದಿನಿಂದ ಸುಮಾರು 13 ಹೆಸರುಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಇವರು, ಕೊನೆಗೆ ಸಂಸರಾಗಿಯೇ ಉಳಿದಿರುವುದು ಇತಿಹಾಸ. ಅಗರ ಗ್ರಾಮದಲ್ಲಿ 1898 ಜನವರಿ 13 ರಂದು ಜನಿಸಿದ ಇವರು 1939 ರಲ್ಲಿ ಕೇವಲ 40 ವರ್ಷಗಳ ವಯೋಮಾನದಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡು ಮಡಿದಿದ್ದು ದುರಂತವೇ ಸರಿ. ಈ ಅವಧಿಯಲ್ಲಿ ಇವರು ದೇಶದ ವಿವಿಧ ಮೂಲೆಗಳು ಹಾಗೂ ವಿದೇಶಗಳನ್ನು ಸುತ್ತಿ ತಮ್ಮ ಬದುಕಿಗಾಗಿ ಅನೇಕ ವೃತ್ತಿಗಳನ್ನು ಮಾಡಿ 23 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದರು ಎಂದು ಇತಿಹಾಸ ಹೇಳುತ್ತದೆ. ಆದರೆ ನಮಗೆ ಈಗ ಲಭ್ಯ ಇರುವುದು ಕೇವಲ 6 ನಾಟಕಗಳು ಮಾತ್ರ ಆಗಿವೆ. ಇದರೊಂದಿಗೆ ಇವರು ಕಾವ್ಯ, ಕಾದಂಬರಿಗಳನ್ನು ಬರೆದಿದ್ದರು ಎಂಬುದರ ಬಗ್ಗೆ ಉಲ್ಲೇಖಗಳಿವೆ. ಎಲ್ಲ 23 ನಾಟಕಗಳಲ್ಲೂ ಮೈಸೂರಿನ ಒಡೆಯರೇ ಇವರ ಕಥಾವಸ್ತುವಾಗಿದ್ದು ಇದರ ವಿಶೇಷತೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ನಮ್ಮ ಜಿಲ್ಲೆ ಸಾಹಿತ್ಯ, ಜಾನಪದದಲ್ಲಿ ಅತಿ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಇದು ಜಾಗೃತ ಭೂಮಿಯಾಗಿದ್ದು ವಿಶ್ವಮಾನವ ಸಂದೇಶ ಸಾರಿದ ಅನೇಕ ಪವಾಡ ಪುರುಷರ ನೆಲೆವೀಡಾಗಿದೆ. ಇಂತಹ ಭೂಮಿಯಲ್ಲಿ ಸಂಸ ಹುಟ್ಟಿದ್ದು ನಮ್ಮೆಲ್ಲರ ಪುಣ್ಯವಾಗಿದೆ. ಇವರ ಬಗ್ಗೆ ಜಿಲ್ಲೆಯ ಅನೇಕರಿಗೆ ಮಾಹಿತಿ ಇಲ್ಲ. ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಸಂಸರೂ ಒಬ್ಬರಾಗಿದ್ದಾರೆ. ಇವರನ್ನು ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಮಲ್ಲೇಶ್, ಸಂಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕಸಾಪ ಯರಿಯೂರು ನಾಗೇಂದ್ರ ಆಶಯ ನುಡಿಗಳನ್ನಾಡಿದರು, ಮುಖ್ಯ ಶಿಕ್ಷಕ ರಮೇಶ್ ಅಧ್ಯಕ್ಷೀಯ ಭಾಷಣದ ಜತೆಗೆ ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.

ಗ್ರಾಪಂ ಉಪಾಧ್ಯಕ್ಷೆ ಮುಬಾರಕ್ ಉನ್ನೀಸಾ, ಉಪ ತಹಸೀಲ್ದಾರ್ ಪುಷ್ಪವತಿ, ಪಿಎಸ್‌ಐ ಗೋಪಾಲಕೃಷ್ಣ, ನಿವೃತ್ತ ಶಿಕ್ಷಕ ಲಿಂಗರಾಜು, ಶಿಕ್ಷಕರಾದ ಮಹದೇವ, ಸುರೇಶ್, ಚೆನ್ನಮಲ್ಲು, ಶಿವಕುಮಾರ್, ರವಿಕೀರ್ತಿ, ಆಶಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net