

ವಿಜಯಪುರ: ಡಾ. ಸಿದ್ದಲಿಂಗಯ್ಯನವರು ಕಾವ್ಯ, ವಿಮರ್ಶಕ, ನಾಟಕ, ಪ್ರಬಂಧ, ಸಂಶೋಧನೆ, ಆತ್ಮಕಥನ ಸೇರಿ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಕವಿ ಸಿದ್ದಲಿಂಗಯ್ಯ ರಾಷ್ಟ್ರ ಕವಿಗಳ ಸಾಲಿನಲ್ಲಿ ಸೇರಬೇಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜೈ ಭೀಮ ಸೇನಾ ಆಶ್ರಯದಲ್ಲಿ ಸೋಮವಾರ ಡಾ. ಸಿದ್ದಲಿಂಗಯ್ಯನವರ ನಾಲ್ಕನೇ ಪುಣ್ಯ ಸ್ಮರಣೋತ್ಸವದ ಹಿನ್ನೆಲೆ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕವಿ ಸಿದ್ದಲಿಂಗಯ್ಯನವರು ಶ್ರವಣಬೆಳಗೊಳದಲ್ಲಿ ನಡೆದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಲ್ಲದೆ, ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಮತ್ತು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರ ಚಿಂತನೆಗಳು ಇಪ್ಪತ್ತೊಂದನೆಯ ಶತಮಾನದ ಯುವಕರಿಗೆ ಸ್ಪೂರ್ತಿದಾಯಕವಾಗಿವೆ ಎಂದರು.
ಸಾಹಿತಿ ಶೇಷರಾವ್ ಮಾನೆ ಸಮಾರಂಭ ಉದ್ಘಾಟಿಸಿ, ಸಿದ್ದಲಿಂಗಯ್ಯನವರು ರಾಜ್ಯದ ಅಪರೂಪದ ಸಾಹಿತಿಯಾಗಿದ್ದರು. ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ ಹಾಗೂ ಹೊಲೆಮಾದಿಗರ ಹಾಡು ಇವು ಎರಡು ಹಾಡುಗಳು ರಾಜ್ಯದಲ್ಲಿ ಅತ್ಯಂತ ಪ್ರಭಾವ ಬೀರಿದ್ದವು. ಗ್ರಾಮದೇವತೆಗಳು ವಿಷಯ ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು ಎಂದರು.
ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಲಿಸಾಬ ಖಡಕೆ, ಡಾ. ಸುರೇಖಾ ರಾಠೋಡ, ಸುಭಾಷ ನಾಯ್ಕೋಡಿ ಮತ್ತು ರನಾಥ ಬಾಣಿಕೋಲ ಆಗಮಿಸಿದ್ದರು. ಕೊನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಂಟಕ ಸಂತೋಷ ಭಾಸ್ಕರ, ನಾರಾಯಣ ಪವಾರ, ದೇವದಾಸ ತೊರವಿ, ಯಶವಂತ ದೊಡಮನಿ, ಬಸವರಾಜ ಹಾದಿಮನಿ, ಸತೀಶ ಗುಡ್ಡೋಡಗಿ, ಪರುಶರಾಮ ಮಾದರ, ರಮೇಶ ಕರಾಬಿ, ಅಶೋಕ ನಾಯ್ಕೋಡಿ, ಪರಸಪ್ಪಾ ವಾಲಿಕಾರ, ಅಶೋಕ ನಂದಿಹಾಳ ಮತ್ತಿತರರಿದ್ದರು.