ಚನ್ನಕೇಶವಸ್ವಾಮಿ ದೇಗುಲದ ಬಾಗಿಲು ಬಂದ್

01
ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯನ್ನು ಬಂದ್ ಮಾಡಿರುವುದು.
Published on

ಬೇಲೂರು: ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯನ್ನು ಭಾನುವಾರ ಮಧ್ಯಾಹ್ನ 3.30 ರಿಂದ ಬಂದ್ ಮಾಡಿದ್ದರಿಂದ ದೇಗುಲಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನವಿಲ್ಲದೆ ದೇವಸ್ಥಾನದಲ್ಲಿನ ಶಿಲ್ಪಕಲೆಯನ್ನು ವೀಕ್ಷಿಸಿದರು.

ರಜಾ ದಿನವಾದ ಭಾನುವಾರ ಬೆಳಗ್ಗೆಯಿಂದಲೇ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸಿ ದೇವರ ದರ್ಶನದೊಂದಿಗೆ ದೇವಸ್ಥಾನವನ್ನು ವೀಕ್ಷಿಸಿದರು. ಆದರೆ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟರ್ ಹಾಗೂ ನರಸಿಂಹ ಪ್ರಿಯ ಭಟ್ಟರ್ ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ದೇವರಿಗೆ ವಿಶೇಷ ಪೂಜೆಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ಮಧ್ಯಾಹ್ನ 3.30ಕ್ಕೆ ದೇವರ ಗರ್ಭ ಗುಡಿಯನ್ನು ದೇಗುಲದ ಸಿಬ್ಬಂದಿ ಸಂಪೂರ್ಣ ಬಂದ್ ಮಾಡಿ ಗರ್ಭ ಗುಡಿಯ ಬಾಗಿಲಿಗೆ ಬೀಗ ಹಾಕಿ ತೆರಳಿದರು.

ದೇವರ ಗರ್ಭಗುಡಿಯನ್ನು ಸೋಮವಾರ ಬೆಳಗ್ಗೆ 6.30ಕ್ಕೆ ಎಂದಿನಂತೆ ಬಾಗಿಲು ತೆರೆದು ಶುದ್ಧಿ ಕಾರ್ಯ ನಡೆಸಿದ ನಂತರ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಆದರೆ ಚಂದ್ರ ಗ್ರಹಣದ ಕಾರಣ ಗರ್ಭಗುಡಿ ಬಂದ್ ಮಾಡಿದ್ದರಿಂದ ಪ್ರವಾಸಿಗರು ಹಾಗೂ ಭಕ್ತರು ಶ್ರೀ ಚನ್ನಕೇಶವಸ್ವಾಮಿ ದರ್ಶನ ಸಿಗದೆ ದ್ವಾರ ಬಾಗಿಲಿನಲ್ಲೇ ದೇವರಿಗೆ ಕೈಮುಗಿದು ದೇಗುಲ ವೀಕ್ಷಿಸಿ ಹಿಂತಿರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net