

ರೋಗಿಯ ಆರ್ಥಿಕ ಹಿನ್ನೆಲೆ ಅರ್ಥ ಮಾಡಿಕೊಂಡು ವೈದ್ಯರು ಚಿಕಿತ್ಸೆ ನೀಡಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಮತ್ತು ಸಾಧಕ ವೈದ್ಯರಿಗೆ ‘ವೈದ್ಯಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೋಗಿಗಳಿಗೆ ನೀಡುವ ಚಿಕಿತ್ಸೆ ರೋಗಕ್ಕಿಂತ ಅಪಾಯಕಾರಿ ಆಗಬಾರದು. ಅವಶ್ಯಕತೆ ಇದ್ದರೆ ಮಾತ್ರ ವೈದ್ಯರು ಚಿಕಿತ್ಸೆ ನೀಡಬೇಕು. ತಮ್ಮ ಬಳಿಗೆ ಬಂದ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ವೈದ್ಯರ ಪ್ರಮುಖ ಜವಾಬ್ದಾರಿ. ಜತೆಗೆ, ಚಿಕಿತ್ಸೆ ನೀಡುವ ಮೊದಲ ರೋಗಿಯ ಆರ್ಥಿಕ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು. ಅವರ ಆರ್ಥಿಕ ಹಿನ್ನೆಲೆಯ ಚೌಕಟ್ಟಿನಲ್ಲಿ ಒಳ್ಳೆಯ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ರೋಗಿಗಳು ಅವರ ಕಷ್ಟ ಹೇಳಿಕೊಳ್ಳಲು ಸಮಯ ನೀಡಬೇಕು. ರೋಗಿಯ ಜತೆಗೆ ಮಾತನಾಡಬೇಕು, ಮಾತನಾಡಿಸಬೇಕು, ಮಾತನಾಡಲು ಅವಕಾಶ ನೀಡಬೇಕು. ರೋಗಿಗಳನ್ನು ಮುಟ್ಟಿ ಚಿಕಿತ್ಸೆ ನೀಡಬೇಕು. ಆಗ ರೋಗಿಯ ಆತ್ಮ ವಿಶ್ವಾಸವೂ ಹೆಚ್ಚಾಗುತ್ತದೆ ಎಂದರು.