ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷೃ ಆರೋಪ

crime
Published on

ಮಂಗಳೂರು: ರಸ್ತೆ ಅಪಘಾತದಲ್ಲಿ ಕಾಲಿಗೆ ಸಣ್ಣ ಗಾಯಗೊಂಡಿದ್ದ ಬಾಲಕ ಕುಳಾಯಿ ನಿವಾಸಿ ಅರ್ಫಾನ್ (16) ಕುಳಾಯಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಸಿಪಿಐ ಎಂ ಮುಖಂಡರಾದ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಡಿವೈಎಫ್‌ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಕಾಂಗ್ರೆಸ್ ಮುಖಂಡ ಪುರುಷೋತ್ತಮ ಚಿತ್ರಾಪುರ ಆಗಮಿಸಿ ಆಕ್ರೋಶಿತರನ್ನು ಸಮಾಧಾನಿಸಿದರು.

ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ನ್ಯಾಯ ಒದಗಿಸಲು ಆಗ್ರಹಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ತಿಮ್ಮಯ್ಯ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಮುಖಂಡರು, ಮೃತರ ಕುಟುಂಬಸ್ಥರು, ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಮುಖಂಡರ ಬೇಡಿಕೆಯಂತೆ ಪ್ರಕರಣದ ತನಿಖೆಗಾಗಿ ಖಾಸಗಿ ವೈದ್ಯರನ್ನು ಒಳಗೊಂಡ ಎಂಟು ಮಂದಿ ತಜ್ಞ ವೈದ್ಯರ ತಂಡವನ್ನು ರಚಿಸುವುದಾಗಿ ಘೋಷಿಸಿದರು. ಕಾಲಮಿತಿಯ ಒಳಗಡೆ ವರದಿ ಪಡೆದು ಕ್ರಮ ಕೈಗೊಳ್ಳುವುದು, ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net