

ಸೋಮವಾರಪೇಟೆ: ಪಟ್ಟಣದ ಹೃದಯ ಭಾಗದಲ್ಲಿ ಸುಮಾರು 90 ವರ್ಷಗಳ ಇತಿಹಾಸವಿರುವ ವಿದ್ಯಾಗಣಪತಿ ನಂಬಿದವರ ಕೈಹಿಡಿಯುವ ದೈವ ಎಂದು ನಂಬಿಕೆ ಭಕ್ತರ ವಲಯದಲ್ಲಿದೆ.
ವಿಘ್ನವಿನಾಶಕ ವಿದ್ಯಾಗಣಪತಿಯ ಆಶೀರ್ವಾದವಿದ್ದರೆ ಮಕ್ಕಳು ವಿದ್ಯೆ ಕಲಿತು ದೊಡ್ಡ ಸ್ಥಾನಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಕ್ಕಳ ಜನನ ದೋಷವಿದ್ದರೆ, ಪೂಜೆ ಮಾಡಿಸಿದ ನಂತರ ಪರಿಹಾರವಾಗುತ್ತದೆ. ಗ್ರಹಚಾರ ದೋಷದಿಂದ ಮುಕ್ತರಾಗಬಹುದು ಎಂಬ ನಂಬಿಕೆಯೂ ಇದೆ.
ಕೃಷಿ ಭೂಮಿಯಲ್ಲಿ ಕಾಡಾನೆಗಳ ಕಾಟದಿಂದ ಕೃಷಿ ಫಸಲು ಹಾನಿಯಾಗುತ್ತಿದ್ದರೆ, ಕೃಷಿಕರು ಬಂದು ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿ ಹರಕೆ ಮಾಡಿಕೊಳ್ಳುತ್ತಾರೆ. ಕೃಷಿ ಫಸಲು ಕೈ ಸೇರಿದರೆ, ವಾರ್ಷಿಕವಾಗಿ ವಿಶೇಷ ಪೂಜೆ ಮಾಡಿಸುತ್ತಾರೆ. ಮನೆಗಳಲ್ಲಿ ಇಲಿ ಕಾಟ ಹೆಚ್ಚಾದರೂ ಅನೇಕ ಜನರು ಗಣಪತಿ ಮೊರೆ ಹೋಗುವ ನಿದರ್ಶನಗಳ ಬಗ್ಗೆ ಪೂಜಾರಿ ಹೇಳುತ್ತಾರೆ.
ಮನೆಯಲ್ಲಿ ಶುಭ ಕಾರ್ಯ ನಡೆಯಬೇಕಾದರೂ ಮೊದಲ ಗಣಪತಿಗೆ ಪೂಜೆ ಮಾಡಿಸುತ್ತಾರೆ. ಮಕ್ಕಳ ಮದುವೆ, ಸೈಟ್ ಖರೀದಿ, ಮನೆ ಕಟ್ಟುವುದು ಎಲ್ಲದಕ್ಕೂ ದೇವರ ಅನುಗ್ರಹಕ್ಕಾಗಿ ಬೇಡಿಕೆ ಇಡುತ್ತಾರೆ.
ದೇವಾಲಯದಲ್ಲಿ ಲಗ್ನಪತ್ರಿಗೆ ಪೂಜೆ, ಮದುವೆಗಳು ನಡೆದರೆ, ಕುಟುಂಬದಲ್ಲಿ ಸಮೃದ್ಧಿ ಎಂಬ ನಂಬಿಕೆಯೂ ಇದೆ. ಹೊಸ ವಾಹನಗಳನ್ನು ಖರೀದಿಸಿದರೆ ಮೊದಲು ಗಣಪತಿ ದೇವಾಲಯದಲ್ಲಿ ಪೂಜೆ ಮಾಡಿಸುತ್ತಾರೆ. ಗ್ರಾಮೀಣ ಭಾಗದಿಂದಲೂ ಪೂಜೆ ಮಾಡಿಸಲು ವಾಹನಗಳನ್ನು ತರುತ್ತಾರೆ.
ಮಳೆ-ಬೆಳೆ, ಸಮೃದ್ಧಿಗಾಗಿ ಸಾಮೂಹಿಕ ಪೂಜೆ
ರಾಜಕಾರಣಿಗಳಿಗೆ ವಿದ್ಯಾಗಣಪತಿ ಬಗ್ಗೆ ವಿಶೇಷ ನಂಬಿಕೆಯಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವವರು ವಿದ್ಯಾಗಣಪತಿಗೆ ಪೂಜೆ ಸಲ್ಲಿಸಿಯೇ ನಾಮಪತ್ರ ಸಲ್ಲಿಸುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಾರೆ. ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ದೇವಾಲಯದೊಳಗೆ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಮೃತ್ಯುಂಜಯ ಪೂಜೆ, ನವಗ್ರಹ ಪೂಜೆ ನಡೆಯುತ್ತದೆ. ಗೌರಿ-ಗಣೇಶ ಹಬ್ಬ, ಶಿವರಾತ್ರಿ, ಯುಗಾದಿ ಹಬ್ಬದಂದು ವಿಶೇಷ ಪೂಜೆ ನಡೆಯುತ್ತದೆ. ನೂರಾರು ಭಕ್ತರು ಸೇರಿ ಮಳೆ-ಬೆಳೆ, ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ.
ಸಂಕಷ್ಟ ಚತುರ್ಥಿ ವಿಶೇಷ ಪೂಜೆ ಪ್ರತಿ ತಿಂಗಳು ಹುಣ್ಣಿಮೆಯ ನಂತರದ 4ನೇ ದಿನಕ್ಕೆ ಸಂಕಷ್ಟ ಚತುರ್ಥಿ ವಿಶೇಷ ಪೂಜೆ ನಡೆಯುತ್ತದೆ. ವಿದ್ಯಾಗಣಪತಿಗೆ ವಿಶೇಷ ಪೂಜೆ ನಡೆಯುತ್ತದೆ. ಗಣಪತಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ಹೂ, ಬೆಣ್ಣೆ, ಆರಿದ್ರಾ, ಅರಿಶಿಣ, ಭಸ್ಮ, ವಿಭೂತಿ, ಗಂಧದ, ನವಿಲುಗರಿ ಅಲಂಕಾರಗಳು ಭಕ್ತಾದಿಗಳನ್ನು ಅಕರ್ಷಿಸುತ್ತವೆ. ಪ್ರಾರಂಭದ ದಿನಗಳಲ್ಲಿ ಗಣಪತಿ ದೇವಾಲಯದ ಜಾಗದಲ್ಲಿ ಭಜನೆ ಮಾಡಲಾಗುತ್ತಿತ್ತು. ನಂತರ ಅಲ್ಲೊಂದು ಗುಡಿ ನಿರ್ಮಿಸಿ, ವಿದ್ಯಾ ಗಣಪತಿಯನ್ನು ಸ್ಥಾಪಿಸಲಾಯಿತು. ಬಸಪ್ಪ ಅವರ ಮುಂದಾಳತ್ವದಲ್ಲಿ ಹಿರಿಯರು ದೇವಾಲಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಕೀಲ ಈಶ್ವರಚಂದ್ರ ವಿದ್ಯಾಸಾಗರ್ ನೇತೃತ್ವದಲ್ಲಿ ಈಗ ಉತ್ತಮ ದೇವಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಎಲ್ಲ ಜಾತಿಯವರನ್ನು ಸೇರಿಕೊಂಡು ಟ್ರಸ್ಟ್ ಮಾಡಲಾಗಿದೆ.
ದೇವಾಲಯ ಪ್ರಾರಂಭದಿಂದಲೂ ಮೂಲ ವಿಗ್ರಹ ವಿದ್ಯಾಗಣಪತಿಯದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಕೇವಲ ಒಂದು ಅಡಿಯ ವಿಗ್ರಹವಾಗಿದೆ. ವಿಗ್ರಹದ ವಿಶೇಷ ಹೊಳಪನ್ನು ಗಮನಿಸಿದ್ದೇನೆ. ನಂಬಿದ ಭಕ್ತರಿಗೆ ಒಳ್ಳೆಯದು ಆಗುತ್ತದೆ. ದೇವಾಲಯದಲ್ಲಿ ನೂರಾರು ಲಗ್ನಪತ್ರಿಕೆಗಳಿಗೆ ಪೂಜೆ, ಮದುವೆಗಳು ನಡೆದಿವೆ. ಅತಿ ಕಡಿಮೆ ಖರ್ಚಿನಲ್ಲಿ ಮದುವೆಯಾಗಿದ್ದಾರೆ. ಸುಖ, ಸಂಸಾರ ಕಟ್ಟಿಕೊಂಡಿದ್ದಾರೆ. ಇವತ್ತಿಗೂ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಚಂದ್ರಶೇಖರಯ್ಯ ಪ್ರಧಾನ ಅರ್ಚಕರು