ನಾಡು, ನುಡಿಗೆ ಜಿಲ್ಲೆಯ ಕೊಡುಗೆ ಅಪಾರ; ಚುಸಾಪ ಸಂಸ್ಥಾಪಕ ಡಾ.ಎಂಜಿಆರ್ ಅರಸು ಹೇಳಿಕೆ

ನಾಡು, ನುಡಿಗೆ ಜಿಲ್ಲೆಯ ಕೊಡುಗೆ ಅಪಾರ; ಚುಸಾಪ ಸಂಸ್ಥಾಪಕ ಡಾ.ಎಂಜಿಆರ್ ಅರಸು ಹೇಳಿಕೆ
Published on

ಹಾಸನ; ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಯನ್ನು ಉಳಿಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬರ ಮೇಲಿದೆ. ನಾಡು, ನುಡಿಯ ಬೆಳವಣಿಗೆಗೆ ಸಮರ್ಪಿಸಿಕೊಂಡ ಸಾವಿರಾರು ಕನ್ನಡ ಪ್ರೇಮಿಗಳನ್ನು ನೆನೆಯಬೇಕಾಗಿದೆ ಎಂದು ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ ಆರ್ ಅರಸು ಅಭಿಪ್ರಾಯಪಟ್ಟರು.

ನಗರದ ಶಕುನಾದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಡೆಕ್ಕನ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಸನ ಪ್ರಪಂಚದ ಭೂಪಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ಜಿಲ್ಲೆಯಾಗಿದೆ. ನಾಡು ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಜಿಲ್ಲೆಯ ಕೊಡುಗೆ ಅಪಾರ. ಇಂತಹ ಜಿಲ್ಲಾ ಕೇಂದ್ರದಲ್ಲಿ ದೇವರಾಜು ಅರಸು ಅವರ ಭವನ ನಿರ್ಮಾಣ ಆಗಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು.

ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಚುಟುಕು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡು ಈ ಸಾಹಿತ್ಯವನ್ನು ಬೆಳೆಸಬೇಕು. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಷ್ಟೊಂದು ಅಚ್ಚುಕಟ್ಟಾಗಿ, ವಿಜೃಂಭಣೆಯಿಂದ ಆಚರಿಸುತ್ತಿರುವುದು ತುಂಬ ಖುಷಿಯ ವಿಚಾರ. ಕನ್ನಡದ ಮಹತ್ವವನ್ನು ಹಾಗೂ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ಹೊರ ಹೊಮ್ಮಬೇಕು. ವಿದ್ಯಾರ್ಥಿಗಳು ಚುಟುಕು ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ತಾಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ರವಿನಾಕಲಗೂಡು ಮಾತನಾಡಿ, ಶಾಂತಿ, ಸಹನೆ, ಸಂಸ್ಕೃತಿ, ಸೇವಾ ಮನೋಭಾವ, ಸಮರ್ಪಣೆ, ಸೌಜನ್ಯ ಹಾಗೂ ಬದ್ಧತೆಗಳನ್ನು ಕನ್ನಡಿಗರು ಉಸಿರಾಗಿಸಿಕೊಳ್ಳಬೇಕು. ಕನ್ನಡತನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಅನ್ಯಭಾಷೆಗಳು ಕೇವಲ ಕಲಿಯಲಿಕ್ಕೆ ಮಾತ್ರವಿದ್ದು, ಕನ್ನಡ ಭಾಷೆ ನಮ್ಮ ಜೀವನಕ್ಕೆ ರೂಪವನ್ನು ಕೊಡುತ್ತದೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಯಥೇಚ್ಛವಾಗಿ ಅಳವಡಿಸಿಕೊಂಡು ಭಾಷಾಭಿಮಾನ ಹೆಚ್ಚಿಸಬೇಕೆಂದರು.

ಚುಟುಕು ಸಾಹಿತ್ಯ ಚಿಕ್ಕದಾದರೂ ಅರ್ಥಪೂರ್ಣ. ಚುಟುಕುಗಳ ಶೈಲಿ ಚಿಕ್ಕದಾದರೂ, ಅದರ ಒಳಗಿನ ಅರ್ಥ, ಗಾಂಭೀರ್ಯ, ಬದುಕು ಕಟ್ಟಿಕೊಡುವ ಘನತೆ ಅರ್ಥಪೂರ್ಣವಾಗಿರುತ್ತದೆ. ಈ ಸಾಹಿತ್ಯವನ್ನು ಬೆಳೆಸಬೇಕು. ಚುಟುಕು ಸಾಹಿತ್ಯವನ್ನು ಜಿಲ್ಲೆಯಲ್ಲಿ ಸಾಹಿತಿ ಬಾ.ನಂ ಲೋಕೇಶ್ ಅವರು ಶ್ರೀಮಂತಗೊಳಿಸುವ ಕೆಲಸವನ್ನು ಕ್ರಿಯಾಶೀಲತೆಯಿಂದ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದರು.

ಚುಟುಕು ಸಾಹಿತ್ಯ ಪರಿಷತ್ ದುದ್ದ ಹೋಬಳಿ ಅಧ್ಯಕ್ಷರಾಗಿ ಪೂರ್ಣಿಮಾ ನಾಗೇಂದ್ರ ಪದಗ್ರಹಣ ಮಾಡಿದರು. ಚುಟುಕು ಕವಿ ಗೋಷ್ಠಿ ಮತ್ತು ನಾಟ್ಯ ರಾಣಿ ಶಾಂತಲಾ ರಾಜ್ಯ ಪ್ರಶಸ್ತಿ ಪುರಸ್ಕಾರ ನಡೆಯಿತು.

ಕರ್ನಾಟಕ ಯುವ ಶಕ್ತಿ ಅಧ್ಯಕ್ಷ ಪ್ರಭಾತ್ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ.ವಿ.ಮಂಜುನಾಥ್, ಚುಸಾಪ ಜಿಲ್ಲಾಧ್ಯಕ್ಷ ಬಾ.ನಂ ಲೋಕೇಶ್, ತಾಲೂಕು ಅಧ್ಯಕ್ಷ ಸೋಮನಾಯ್ಕ, ಡೆಕ್ಕನ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲೆ ಕಾರ್ಯದರ್ಶಿ ಎಚ್.ಎನ್. ಸುನೀಲ್, ಟಿ.ಎಂ.ಸುಪ್ರಿತ್ ಕುಮಾರ್, ಸಾವಿತ್ರಮ್ಮ ಓಂಕಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net