ಫಲಿತಾಂಶ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಗಿಳಿದ ಜಿಲ್ಲೆ

Ddpi Office
ರಾಯಚೂರಿನ ಅಜಾದ್ ನಗರದಲ್ಲಿರುವ ಡಿಡಿಪಿಐ ಕಚೇರಿ.
Published on

ರಾಯಚೂರು: ರಾಜ್ಯದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯ ಈ ಬಾರಿ ಒಂದು ಸ್ಥಾನ ಕುಸಿತ ಕಂಡಿದ್ದು, ಕಳೆದ ವರ್ಷ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ವರ್ಷ 31ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಶೇಕಡಾವಾರು ಲಿತಾಂಶದಲ್ಲಿಯೂ ಸಾಕಷ್ಟು ಇಳಿಕೆಯುಂಟಾಗಿದೆ.
ಕಳೆದ ವರ್ಷ 30ನೇ ಸ್ಥಾನದಲ್ಲಿದ್ದರೂ ಶೇ.84.2ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ 31ನೇ ಸ್ಥಾನದಲ್ಲಿದ್ದರೂ ಶೇ.61.2ರಷ್ಟು ಫಲಿತಾಂಶ ಬಂದಿದೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಜಿಲ್ಲೆ 3ನೇ ಸ್ಥಾನದಲ್ಲಿರುವು ಅಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಫಲಿತಾಂಶ ಹೆಚ್ಚಳಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರಿಗೆ ತರಬೇತಿ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದರ ಜತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪರೀಕ್ಷೆ ಎದುರಿಸುವ ತರಬೇತಿಯನ್ನು ನೀಡಲಾಗಿತ್ತು. ಆದರೂ ನಿರೀಕ್ಷೆ ಮಟ್ಟಿಗೆ ಫಲ ನೀಡಿಲ್ಲ.
ಜಿಲ್ಲೆಯ ಹೊಸದಾಗಿ ಮತ್ತು ಮರು ಪರೀಕ್ಷೆ ಬರೆದ 31,188 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 19,087 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.61.2ರಷ್ಟು ಫಲಿತಾಂಶ ಬಂದಿದೆ. ಹೊಸದಾಗಿ ಪರೀಕ್ಷೆ 29,527 ವಿದ್ಯಾರ್ಥಿಗಳಲ್ಲಿ 18,746 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.63.49ರಷ್ಟು ಫಲಿತಾಂಶ ಬಂದಂತಾಗಿದೆ.
ತಾಲೂಕುವಾರು ಫಲಿತಾಂಶ ಪಟ್ಟಿಯಲ್ಲಿ ದೇವದುರ್ಗ ತಾಲೂಕು ಮುಂದಿದ್ದು, ಪರೀಕ್ಷೆಗೆ ಹಾಜರಾದ 4,092 ವಿದ್ಯಾರ್ಥಿಗಳಲ್ಲಿ 3,232 (ಶೇ.78.98) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಂಧನೂರು ತಾಲೂಕು ಎರಡನೇ ಸ್ಥಾನದಲ್ಲಿದ್ದು, ಪರೀಕ್ಷೆ ಬರೆದ 5,611 ವಿದ್ಯಾರ್ಥಿಗಳಲ್ಲಿ 4,363 (ಶೇ.77.76) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಮಾನ್ವಿ ತಾಲೂಕು ಮೂರನೇ ಸ್ಥಾನದಲ್ಲಿದ್ದು, ಪರೀಕ್ಷೆಗೆ ಹಾಜರಾದ 5,505 ವಿದ್ಯಾರ್ಥಿಗಳಲ್ಲಿ 3,365 (ಶೇ.61.13) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲಿಂಗಸುಗೂರು ನಾಲ್ಕನೇ ಸ್ಥಾನದಲ್ಲಿದ್ದು ಪರೀಕ್ಷೆಗೆ ಹಾಜರಾದ 6,136 ವಿದ್ಯಾರ್ಥಿಗಳಲ್ಲಿ 3,600 (ಶೇ.58.67) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ರಾಯಚೂರು ಕೊನೆ ಸ್ಥಾನದಲ್ಲಿದ್ದು ಪರೀಕ್ಷೆಗೆ ಹಾಜರಾದ 8,183 ವಿದ್ಯಾರ್ಥಿಗಳಲ್ಲಿ 4,186 (ಶೇ.51.15) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net