

ಮಂಡ್ಯ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಪುರುಷರಿಗಿಂತ ಮಹಿಳೆ ಮತದಾರರ ಸಂಖ್ಯೆ 16,921 ಹೆಚ್ಚಿದೆ.
ಜಿಲ್ಲೆಯಲ್ಲಿ ಒಟ್ಟು 15,41,210 ಮತದಾರರಿದ್ದು, ಈ ಪೈಕಿ 7,62,067 ಪುರುಷ ಹಾಗೂ 7,78,988 ಮಹಿಳೆಯರು, 155 ತೃತೀಯ ಲಿಂಗಿಗಳು ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ.
ಇನ್ನು ಕರಡು ಮತದಾರರ ಪಟ್ಟಿಯಂತೆ ತಾಲೂಕುವಾರು ಅಂಕಿ-ಅಂಶ ಗಮನಿಸಿದರೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,24,886 ಪುರುಷ, 1,25,121 ಮಹಿಳಾ ಮತ್ತು 25 ತೃತೀಯ ಲಿಂಗಿಗಳು ಸೇರಿದಂತೆ 2,50,032 ಮತದಾರರಿದ್ದಾರೆ. ಮದ್ದೂರಿನಲ್ಲಿ 1,04,081 ಪುರುಷ, 1,10,382 ಮಹಿಳಾ ಮತ್ತು 25 ತೃತೀಯ ಲಿಂಗಿಗಳು ಸೇರಿದಂತೆ 2,14,488, ಮೇಲುಕೋಟೆ ಕ್ಷೇತ್ರದಲ್ಲಿ 99,271 ಪುರುಷ, 1,00,959 ಮಹಿಳಾ ಮತ್ತು 7 ತೃತೀಯ ಲಿಂಗಿಗಳು ಸೇರಿದಂತೆ 2,00,237 ಹಾಗೂ ಮಂಡ್ಯ ಕ್ಷೇತ್ರದಲ್ಲಿ 1,10,277 ಪುರುಷ, 1,14,958 ಮಹಿಳಾ ಮತ್ತು 32 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,25,267 ಮತದಾರರಿದ್ದಾರೆ.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 1,05,347 ಪುರುಷ, 1,09,409 ಮಹಿಳಾ ಮತ್ತು 44 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,14,800, ನಾಗಮಂಗಲ ಕ್ಷೇತ್ರದಲ್ಲಿ 1,07,560 ಪುರುಷ, 1,07,699 ಮಹಿಳಾ ಮತ್ತು 11 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,15,270 ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,10,645 ಪುರುಷ, 1,10,460 ಮಹಿಳಾ ಮತ್ತು 11 ತೃತೀಯ ಲಿಂಗಿಗಳು ಮತದಾರರು ಸೇರಿದಂತೆ ಒಟ್ಟು 2,21,116 ಜನರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.
ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಾರ್ಯಾಲಯ, ತಹಸೀಲ್ದಾರ್ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಪರಿಶೀಲಿಸಿಕೊಂಡು ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನ.27ರಿಂದ ಡಿ.9ರೊಳಗೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ನಾಲ್ಕು ದಿನ ಯುವ ಮತದಾರರ ಸೇರ್ಪಡೆ: ಜಿಲ್ಲೆಯ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ 2024ರ ಜ.1ಕ್ಕೆ ಅರ್ಹರಿರುವ ಮತದಾರರ ಹೆಸರನ್ನು ಪಟ್ಟಿಯಲ್ಲಿ ನೋಂದಾಯಿಸಲು ಕ್ರಮ ವಹಿಸಲಾಗಿದೆ. ಸ್ವೀಕೃತವಾದ ನಮೂನೆಗಳನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲಾಗಿದೆ. ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಯುವ ಮತದಾರರ ಸೇರ್ಪಡೆಗೆ ನ.18 ಮತ್ತು 19, ಡಿ.2 ಮತ್ತು 3ರಂದು ಮಿಂಚಿನ ನೋಂದಣಿ ಕಾರ್ಯವನ್ನು ಎಲ್ಲ ಮತಗಟ್ಟೆಗಳಲ್ಲಿ ಆಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಸಭೆಯಲ್ಲಿ ವಿವಿಧ ಪಕ್ಷದ ಪ್ರತಿನಿಧಿಗಳಾದ ಸುಂಡಹಳ್ಳಿ ಮಂಜುನಾಥ್, ನವೀನ್‌ಕುಮಾರ್, ಎಂ.ಬಿ.ರಮೇಶ್, ದಿನೇಶ್ ಇತರರು ಇದ್ದರು.