ಅಕ್ರಮ ವಲಸಿಗರಿಂದ ಉಲ್ಲಂಘನೆಯಾದರೆ ಜಿಲ್ಲಾಡಳಿತವೇ ಹೊಣೆ

cnc
Published on

ಮಡಿಕೇರಿ: ಬಾಂಗ್ಲಾದೇಶಿಗರು, ರೋಹಿಂಗ್ಯಗಳು, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶದ ಅಕ್ರಮ ವಲಸಿಗರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ರೂಪದಲ್ಲಿ ಆಶ್ರಯ ಪಡೆದಿದ್ದಾರೆ. ಜಾತಿ ಜನಗಣತಿಯ ಸಂದರ್ಭ ಇವರುಗಳನ್ನು ಸಕ್ರಮಗೊಳಿಸಿದರೆ ಮತ್ತು ಇವರುಗಳಿಂದ ಕಾನೂನು ಉಲ್ಲಂಘನೆಯಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಎಚ್ಚರಿಕೆ ನೀಡಿದರು.

ಜಾತಿ ಜನಗಣತಿಯ ಸಂದರ್ಭ ಕೊಡವರು ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ಕೊಡವ ಎಂದೇ ಬರೆಸಬೇಕೆನ್ನುವ ಕುರಿತು ಮತ್ತು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮೂರ್ನಾಡಿನಲ್ಲಿ ನಡೆಸಿದ ೧೩ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದ ಸೆ.೨೨ ರಿಂದ ಅ.೭ರ ವರೆಗೆ ನಡೆಯಲಿರುವ ಜಾತಿವಾರು ಗಣತಿಯ ಸಂದರ್ಭ ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ಕೊಡವ ಎಂದೇ ಬರೆಸುವ ಮೂಲಕ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದರು.

ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಬಾಂಗ್ಲಾದೇಶಿಗರು, ರೋಹಿಂಗ್ಯಗಳು, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶದ ಅಕ್ರಮ ವಲಸಿಗರು ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮಡಿಕೇರಿಯ ಪೊಲೀಸ್ ವಸತಿ ಗೃಹಕ್ಕೇ ನುಗ್ಗಿ ಕಳ್ಳತನ ನಡೆಸಿದ ಮಧ್ಯಪ್ರದೇಶದ ದಾರ್ ಜಿಲ್ಲೆಯ ತಾಂಡ ಪ್ರದೇಶದ ತಂಡವನ್ನು ಕೊಡಗು ಪೊಲೀಸರು ಸೆರೆ ಹಿಡಿದ್ದಿದ್ದರೂ, ಜಿಲ್ಲೆಯಲ್ಲೇ ಆಶ್ರಯ ಪಡೆದಿರುವ ಅಕ್ರಮ ವಲಸಿಗರಿಂದ ಆತಂಕವಿದೆ ಎಂದು ಎನ್.ಯು.ನಾಚಪ್ಪ ಗಮನ ಸೆಳೆದರು.

ಈಗಾಗಲೇ ಜಾತಿವಾರು ಜನಗಣತಿಯಲ್ಲಿ ಪ್ರತಿಕುಟುಂಬಗಳ ಮಾಹಿತಿ ದಾಖಲಿಸುವ ಕೆಲಸವನ್ನು ವಿದ್ಯುತ್ ಇಲಾಖೆ ಮಾಡುತ್ತಿದೆ. ಎಲ್ಲಾ ಮನೆಗಳ ವಿದ್ಯುತ್ ಮೀಟರ್ ಗಳನ್ನು ಅನುಸರಿಸಿ ಜಿಯೋ ಟ್ಯಾಗಿಂಗ್ ಗಾಗಿ ಸ್ಟಿಕರ್‌ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅಕ್ರಮ ವಲಸಿಗರು ನೆಲೆಸಿರುವ ಬಾಡಿಗೆ ಮನೆ ಮತ್ತು ಲೈನ್ ಮನೆಗಳಿಗೆ ಕೂಡ ಸ್ಟಿಕರ್ ಅಳವಡಿಸಲಾಗಿದೆ. ಇದನ್ನು ಆಧರಿಸಿ ಜನಗಣತಿ ಮಾಹಿತಿದಾರರು ಸಹಜವಾಗಿಯೇ ಅಕ್ರಮ ವಲಸಿಗ ಕುಟುಂಬಗಳ ಮಾಹಿತಿಯನ್ನು ಕೂಡ ಕಲೆ ಹಾಕಲಿದ್ದಾರೆ. ಈ ಸಂದರ್ಭ ಅಕ್ರಮ ವಲಸಿಗರು ಸಕ್ರಮಗೊಳ್ಳುವ ಅಥವಾ ಅಧಿಕೃತ ನಿವಾಸಿಗಳೆಂದು ಘೋಷಿಸಲ್ಪಡುವ ಅಪಾಯವಿದ್ದು, ಕೊಡವರು ಜಾಗೃತರಾಗಬೇಕಾಗಿದೆ. ಒಂದು ವೇಳೆ ಕಾನೂನು ಮೀರಿ ಅಕ್ರಮ ವಲಸಿಗರು ಸ್ಥಳೀಯ ನಿವಾಸಿಗಳೆಂದು ಘೋಷಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಜಿಲ್ಲಾಡಳಿತವೇ ಇದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್ ನೀಡಿದಂತೆ ಕೊಡಗಿನಲ್ಲೂ ಕಾರ್ಮಿಕ ಸಮಸ್ಯೆಯನ್ನು ನೀಗಿಸಲು ವಲಸಿಗ ಕಾರ್ಮಿಕರಿಗೆ ಗೆಸ್ಟ್ ವರ್ಕರ್ ಪರ್ಮಿಟ್ ನೀಡಬೇಕು. ವಾರ್ಷಿಕ ಕೆಲಸ ಮುಗಿದ ನಂತರ ಅವರ ರಾಜ್ಯ ಅಥವಾ ದೇಶಕ್ಕೆ ಹಿಂದಿರುಗಬೇಕು. ಮತ್ತೆ ಬರಬೇಕಾದರೆ ವರ್ಕ್ ಪರ್ಮಿಟ್ ನವೀಕರಣಗೊಳಿಸುವ ಪದ್ಧತಿ ಜಾರಿಗೆ ತರಬೇಕು. ಆ ಮೂಲಕ ಜನಸಂಖ್ಯೆ ಪಲ್ಲಟಕ್ಕೆ ತಡೆ ಹಾಕಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಬಿದ್ದಂಡ ಉಷಾ ದೇವಮ್ಮ, ಪಾಲಂದೀರ ರೀಟಾ, ಬಿದ್ದಂಡ ನೀತು, ನುಚ್ಚಿಮಣಿಯಂಡ ಸ್ವಾತಿ, ತಿರ್ಕಚೇರಿರ ಅನಿತಾ, ಚಂಞಂಡ ಕನ್ನಿಕ ಸೂರಜ್, ಕೊಚ್ಚೆರ ನಿಧಿ, ಚೊಟ್ಟೇರ ಪವಿತ್ರ, ಸರ್ವಶ್ರೀ ನಂದೇಟಿರ ರವಿ, ಬಡುವಂಡ ವಿಜಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೋಕ್ಕಡ ಕಾಶಿ, ಪೆಮ್ಮುಡಿಯಂಡ ವೇಣು, ಚಂಞಂಡ ಸೂರಜ್, ಬೊಳ್ಳಚೆಟ್ಟಿರ ಸುರೇಶ್ ಮತ್ತಿತರರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿಯ ಶಾಂತಿಯುತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net