ಬಿಜೆಪಿಯಲ್ಲಿ ನಿಷ್ಠಾವಂತರ ಕಡೆಗಣನೆ, ಹಿರಿಯ ಮುಖಂಡ ಶಿವಾಜಿರಾವ್ ಶಿಂಧೆ ಬೇಸರ, ಕಾರ್ಯಕರ್ತರ ಸಲಹೆ ಪಡೆಯಲು ಪಟ್ಟು

13 Nela Ph 01 BJP Meeting
Published on

ನೆಲಮಂಗಲ: ಕ್ಷೇತ್ರದಲ್ಲಿ ಹಳೆಯ ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಜತೆಗೆ ಅರ್ಹ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುತ್ತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಶಿವಾಜಿರಾವ್‌ಶಿಂಧೆ ಆರೋಪಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದ ಫಾರಂ ಹೌಸ್‌ನಲ್ಲಿ ಸೋಲೂರು ಹೋಬಳಿ ಹಿರಿಯ ಮುಖಂಡರು ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು.

4 ದಶಕಗಳಿಂದಲೂ ಹೋಬಳಿ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಜತೆಗೆ ಪಕ್ಷ ನೀಡಿದ್ದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರದಿಂದ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ನಿಗಮಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲೂ ಹೋಬಳಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಪಕ್ಷ ಸಂಘಟನೆಗೆ ತೊಡಕಾಗಲಿದ್ದು, ಹಿರಿಯ ಮುಖಂಡರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪಕ್ಷದಿಂದ ಜವಾಬ್ದಾರಿ ನೀಡುವ ಮೊದಲು ಹೋಬಳಿಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆ ಸೂಚನೆ ಪಡೆದುಕೊಳ್ಳಬೇಕು. ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಪಕ್ಷ ಜಯಶಾಲಿಯಾದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ವಿಶ್ವಾಸರ್ಹ ಅಭ್ಯರ್ಥಿಗಳನ್ನು ಚುನಾವಣೆಗೆ ಆಯ್ಕೆ ಮಾಡಬೇಕಿದೆ ಎಂದು ಮೋಟಗಾನಹಳ್ಳಿ ಗ್ರಾಪಂ ಸದಸ್ಯ ಎಂ.ಜಿ.ರೇವಣ್ಣ ಮನವಿ ಮಾಡಿದರು.

ಅನ್ಯ ಪಕ್ಷಗಳನ್ನು ತ್ಯಜಿಸಿ ಬಂದ ಪಕ್ಷಾಂತರಿಗೆ ಮಣೆ ಹಾಕಲಾಗುತ್ತಿದೆ. ಕಾರ್ಯಕರ್ತರ ಸಲಹೆ ಪರಿಗಣನೆಗೆ ಅವಕಾಶ ಮಾಡಿಕೊಡದೇ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕಮಾಡಲಾಗಿದೆ ಎಂದು ಸಭೆಯಲ್ಲಿ ಮುಖಂಡರು ಆರೋಪಿಸಿದರು.

ತಾಲೂಕಿನಲ್ಲಿ ಬಿಜೆಪಿ ಶಾಸಕರಿಲ್ಲ. ತಾಲೂಕಿನಲ್ಲಿ ಇಬ್ಬರು ಪ್ರಭಾವಿಗಳು ಬಣ ಮಾಡಿಕೊಂಡು ಕಾರ್ಯಕರ್ತರಲ್ಲಿ ಗೊಂದಲ ತಂದಿದ್ದಾರೆ. ಬಿಜೆಪಿಯಲ್ಲಿ ಎರಡು ಬಣ ಸೃಷ್ಠಿಯಾಗಿದ್ದು, ತಾಲೂಕಿನಲ್ಲಿ ಏಕಮುಖವಾಗಿದ್ದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ವಿಚಾರ ಸಭೆಯಲ್ಲಿ ಪ್ರಸ್ಥಾಪಿಸಲಾಯಿತು.

ಗ್ರಾಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್‌ಮೂರ್ತಿ, ಸದಸ್ಯರಾದ ಕೇಶವ್, ಜಿ.ನಾಗರಾಜು, ಬಸವರಾಜು, ಸೋಲೂರು ಹೋಬಳಿ ಬಿಜೆಪಿ ಮಾಜಿ ಅಧ್ಯಕ್ಷ ಜಯಣ್ಣ, ಸೋಲೂರು ಹೋಬಳಿ ರೈತ ಸಂಘದ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡ ಶಿವರುದ್ರಯ್ಯ, ಶಂಕರಯ್ಯ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net